ಮಂಜೇಶ್ವರ : ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಇವುಗಳ ಉದ್ಘಾಟನಾ ಕಾರ್ಯಕ್ರಮ ಸೋಮವಾರ ನಡೆಯಿತು.
ಮಕ್ಕಳನ್ನು ಕಲಿಕೆಯತ್ತ ಆಕರ್ಷಿಸುವ ಬಣ್ಣ ಬಣ್ಣದ ಚಿತ್ರಗಳನ್ನೊಳಗೊಂಡ ತರಗತಿ ಕೋಣೆಗಳ ಅನಾವರಣ, ಪ್ರೀ ಪ್ರೈಮರಿ ವಿಭಾಗದ ಮಕ್ಕಳಿಗೆ ಪಾಠ ಪುಸ್ತಕ ವಿತರಣೆ ಹಾಗೂ ಶಾಲೆಯ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಮಹಾ ಪೋಷಕರಾಗಿ ಕೈ ಜೋಡಿಸಿದ ಶಾಲಾ ಹಳೆ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಇವೇ ಮೊದಲಾದ ಕಾರ್ಯಕ್ರಮಗಳು ನಡೆದುವು.
ಬಣ್ಣ ಬಣ್ಣದ ಚಿತ್ರಗಳನ್ನೊಳಗೊಂಡ ತರಗತಿ ಕೋಣೆಗಳ ಅನಾವರಣವನ್ನು ಶಾಲಾ ಹಳೆ ವಿದ್ಯಾರ್ಥಿ, ಮುಂಬೈಯ ಖ್ಯಾತ ಉದ್ಯಮಿ, 'ಹೇರಂಭ' ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಶೆಟ್ಟಿ ಇವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು 'ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳ ಜೊತೆಗೆ ಮಕ್ಕಳನ್ನು ಆಕರ್ಷಿಸುವ ಚಟುವಟಿಕೆಗಳು ನಡೆದರೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಉಳಿಯುವವು. ಈ ನಿಟ್ಟಿನಲ್ಲಿ ನಮ್ಮಿಂದಾಗುವ ಸಹಕಾರವನ್ನು ಕೊಡಲು ಮುಂದೆ ಬಂದರೆ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ' ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯÀ ಜನಾರ್ಧನ ಪೂಜಾರಿ ಕುಳೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಹಾಜಿ ಕಂಚಿಲ, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ನಾರಾಯಣ ನಾೈಕ್ ನಡುಹಿತ್ಲು, ಮೋಹಿನಿ ಶೆಟ್ಟಿ ಮಜ್ಜಾರ್, ಪ್ರೀ ಪ್ರೈಮರಿ ವಿಭಾಗದ ರಕ್ಷಕ-ಶಿಕ್ಷಕ ಅಧ್ಯಕ್ಷ ಸತೀಶ್ ಎಲಿಯಾಣ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲೆಯ ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಮಹಾ ಪೋಷಕರಾಗಿ ಕೈ ಜೋಡಿಸಿದ ಶಾಲಾ ಹಳೆ ವಿದ್ಯಾರ್ಥಿಗಳೂ, 'ಹೇರಂಭ' ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಹಾಗೂ ರಘುರಾಮ ಶೆಟ್ಟಿ ಕುಳೂರು ಕನ್ಯಾನ ಇವರನ್ನು ಶಾಲಾ ಪರವಾಗಿ ಸನ್ಮಾನಿಸಲಾಯಿತು. ಪ್ರೀ ಪ್ರೈಮರಿ ವಿಭಾಗದ ಮಕ್ಕಳಿಗೆ ಕೊಡುಗೆಯಾಗಿ ದೊರೆತ ಪಾಠ ಪುಸ್ತಕಗಳ ವಿತರಣೆಯನ್ನು ಮಾಡಲಾಯಿತು. ಈ ಪಾಠ ಪುಸ್ತಕಗಳ ಪ್ರಾಯೋಜಕತ್ವವನ್ನು ವಹಿಸಿದ ನವೀನ್ ಶೆಟ್ಟಿ ಮಜ್ಜಾರ್ ಹಾಗೂ ಶಾಲೆಯ ಮುಂದಿನ ಯೋಜನೆಯಾದ ಶಾಲಾ ಮಕ್ಕಳ ಆಟದ ಉದ್ಯಾನದ ಪ್ರಾಯೋಜಕತ್ವವನ್ನು ವಹಿಸಿರುವ ಮೋಹನ್ ಶೆಟ್ಟಿ ಮಜ್ಜಾರ್ ಇವರ ಅನುಪಸ್ಥಿತಿಯಲ್ಲಿ ಅವರ ಮಾತೃಶ್ರೀಯಾದ ಮೋಹಿನಿ ಶೆಟ್ಟಿ ಮಜ್ಜಾರ್ ಇವರನ್ನು ಅಭಿನಂದಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.