ತಿರುವನಂತಪುರ: ಕೇರಳಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಾಸರಗೋಡು ಜಿಲ್ಲೆ ಸಹಿತ ಎಲ್ಲೆಡೆ ಶನಿವಾರ ರಾತ್ರಿಯಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಮುಂದಿನ ಗುರುವಾರ ತನಕ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಇದನ್ನು ಅನುಸರಿಸಿ, ವಿವಿಧ ಜಿಲ್ಲೆಗಳಲ್ಲಿ ಎಲ್ಲೋ ಮತ್ತು ಆರೆಂಜ್ ಅಲರ್ಟ್ ನೀಡಲಾಗಿದೆ.
ಜುಲೈ 19 ರಂದು ಕಣ್ಣೂರು, ಕಾಸರಗೋಡು, ಜು.20 ರಂದು ಕೋಝಿಕ್ಕೋಡ್, ಕಣ್ಣೂರು, ಕಾಸರಗೋಡು, ಜು. 21 ರಂದು ಕೋಟ್ಟಯಂ, ಎರ್ನಾಕುಳಂ, ಇಡುಕ್ಕಿ ತೃಶೂರು, ಪಾಲಕ್ಕಾಡ್, ಮಲಪ್ಪುರಂ, ವಯನಾಡ್, ಕಾಸರಗೋಡು, ಜು.22 ರಂದು ಪತ್ತನಂತಿಟ್ಟು, ಕೋಟ್ಟಯಂ, ಎರ್ನಾಕುಳಂ, ಇಡುಕ್ಕಿ, ತೃಶೂರ್, ಪಾಲಕ್ಕಾಡ್, ಮಲಪ್ಪುರಂ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ನೀಡಲಾಗಿದೆ. 24 ಗಂಟೆಗಳಲ್ಲಿ 64.5 ರಿಂದ 204.4 ಮಿಮೀ ಮಳೆಯಾಗುವ ನಿರೀಕ್ಷೆಯಿದೆ. ಹೆಚ್ಚಿನ ಮಳೆಯಾಗುವ ಪ್ರದೇಶಗಳಲ್ಲಿ ಆರೆಂಜ್ ಎಚ್ಚರಿಕೆ ನೀಡಲಾಗುವುದು.
ತಗ್ಗು ಪ್ರದೇಶಗಳು, ನದಿ ತೀರಗಳು ಮತ್ತು ಭೂಕುಸಿತ ಸಾಧ್ಯತೆಯ ಪ್ರದೇಶಗಳು ಸೇರಿದಂತೆ ಕಳೆದ ಕೆಲವು ದಿನಗಳಲ್ಲಿ ಕನಿಷ್ಠ ಮೂರು ಸ್ಥಳಗಳಲ್ಲಿ ತೀವ್ರ ಪ್ರಮಾಣದ ಪ್ರವಾಹ ಅಪಾಯವನ್ನು ಘೋಷಿಸಲಾಗಿದೆ. 2018, 2019 ರಲ್ಲಿ ಭೂಕುಸಿತ ಮತ್ತು ಪ್ರವಾಹ ಉಂಟಾಗುವ ಪ್ರದೇಶಗಳಲ್ಲಿ ಭಾರತದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ರಾಜ್ಯ ದುರಂತ ನಿವಾರಣ ಪ್ರಾಧಿಕಾರಗಳ ತಜ್ಞರ ಸಮಿತಿ ನಿವಾಸಿಗಳನ್ನು ಅಲ್ಲಿನ ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಸಿದ್ಧಪಡಿಸಿದ ಸ್ಥಳಕ್ಕೆ ಸ್ಥಳಾಂತರಿಸತೊಡಗಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆರೆಂಜ್ ಬುಕ್ 2021 ಶಿಫಾರಸು ಮಾಡಿದಂತೆ ಕೊರೋನದ ಹಿನ್ನೆಲೆಯಲ್ಲಿ ಪರಿಹಾರ ಶಿಬಿರಗಳ ಸಿದ್ಧತೆಗಳನ್ನು ಜಾಗ್ರತೆಯಿಂದ ಪೂರ್ಣಗೊಳಿಸಬೇಕು ಎಂದು ಹವಾಮಾನ ಕಚೇರಿ ಎಚ್ಚರಿಸಿದೆ.