ಕಾಸರಗೋಡು: ಕೋವಿಡ್ ಪ್ರತಿರೋಧದಲ್ಲಿ ಕಾಸರಗೋಡು ಜಿಲ್ಲೆ ಮತ್ತೊಮ್ಮೆ ಮಾದರಿಯಾಗಿದೆ.
ಪ್ರತಿದಿನ ತಪಾಸಣೆ ಮತ್ತು ವಾಕ್ಸಿನೇಷನ್ ನಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಿದೆ. ಕೋವಿಡ್ ಸಂಬಂಧ ಮರಣ ಸಂಖ್ಯೆ ಕಡಿಮೆ ಹೀಗೆ ಪ್ರತಿರೋಧ ಚಟುವಟಿಕೆಗಳ ಎಲ್ಲ ವಿಚಾರಗಳಲ್ಲೂ ಕಾಸರಗೋಡು ಜಿಲ್ಲೆ ಮುಂಚೂಣಿಯಲ್ಲಿದೆ.
ಕಾಸರಗೋಡು ಜಿಲ್ಲೆಯ ಪ್ರತಿದಿನ ತಪಾಸಣೆ ಶೇ 142 ಆಗಿದೆ. 45 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿಗೆ ಲಸಿಕೆ ನಿಡಿಕೆಯಲ್ಲಿ ಶೇ 98 ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಕೋವಿಡ್ ರೋಗಬಾಧಿತರಲ್ಲಿ ಶೇ 0.3 ಮಂದಿ ಮೃತಪಟ್ಟಿದ್ದಾರೆ. ಉಲ್ಬಣಾವಸ್ಥೆಯಲ್ಲಿದ್ದ ಬಹುತೇಕ ಮಂದಿ ಸಂದರ್ಭೋಚಿತ ಶುಶ್ರೂಷೆ ಲಭಿಸಿದ ಕಾರಣ ಪೂರ್ಣಗುಣಮುಖರಾಗಿದ್ದಾರೆ. ಪ್ರತಿದಿನ ನಡೆಸಿಕೊಂಡು ಬಂದ ವೈಜ್ಞಾನಿಕ ಪ್ರತಿರೋಧ ಚಟುವಟಿಕೆಗಳು ರೋಗ ಹೆಚ್ಚಳವನ್ನು ಗಮನಾರ್ಹ ರೂಪದಲ್ಲಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ ಎಂಬಿತ್ಯಾದಿ ವಿಚಾರಗಳು ಗಮನಾರ್ಹವಾಗಿವೆ.
ಕಳೆದ ಒಂದು ವಾರದಿಂದ ರಾಜ್ಯ ಸರಕಾರ ನಿಗದಿ ಪಡಿಸಿದ್ದ ಸಂಖ್ಯೆಗಿಂತಲೂ ಅಧಿಕ ಪಟ್ಟು ತಪಾಸಣೆಗಳು ಕಾಸರಗೋಡು ಜಿಲ್ಲೆಯಲ್ಲಿ ನಡೆದುಬರುತ್ತಿವೆ. ಪ್ರತಿದಿನ 4 ಸಾವಿರ ಕೋವಿಡ್ ತಪಾಸಣೆ ನಡೆಸಲು ಸರಕಾರ ತೀರ್ಮಾನಿಸಿತ್ತು. ಜಿಲ್ಲೆಯಲ್ಲಿ ಪ್ರತಿದಿನ 5400ಕ್ಕಿಂತ ಅಧಿಕ ತಪಾಸಣೆಗಳು ಪ್ರತಿದಿನ ನಡೆಯುತ್ತಿವೆ.
ಅತ್ಯಧಿಕ ರೋಗಬಧಿತರಿರುವ ಪ್ರದೇಶಗಳನ್ನು ಪತ್ತೆಮಾಡಿ ಆಯಾ ವಲಯಗಳಲ್ಲಿ ಮಾತ್ರ ಸ್ಟ್ರಾಟೆಡ್ ಮಲ್ಟಿ ಸ್ಟೇಜ್ ರಾಂಡಂ ಸಾಂಪ್ಲಿಂಗ್ ತಪಾಸಣೆ ಕ್ರಮವೂ ಕಾಸರಗೋಡು ಜಿಲ್ಲೆಯಲ್ಲಿ ಅನುಷ್ಠಾನದಲ್ಲಿದೆ. ಜಿಲ್ಲೆಯ 8 ಆರೋಗ್ಯ ಬ್ಲೋಕ್ ಗಳ 777 ವಾರ್ಡ್ ಗಳಿಗೂ ತಪಾಸಣೆಗಳನ್ನು ವಿಸ್ತರಿಸಲಾಗಿದೆ. 7 ದಿನಗಳ ನಂತರ ಮತ್ತೆ ತಪಾಸಣೆ ನಡೆಸುವ ರೀತಿ ಇವನ್ನು ಸಜ್ಜುಗೊಳಿಸಲಾಗಿದೆ. ಆಟೋರಿಕ್ಷಾ ಚಾಲಕರು, ಬಸ್ ಸಿಬ್ಬಂದಿ, ಅಂಗಡಿ ಮಾಲೀಕರು, ಕಾರ್ಖಾನೆ, ಉದ್ದಿಮೆ, ವ್ಯಾಪಾರ ಸಂಸ್ಥೆಗಳ ನೌಕರರ, ಕಚೇರಿಗಳ ಸಿಬ್ಬಂದಿ ಸಹಿತ ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಮಂದಿಯನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ.
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆ, ಟಾಟಾ ಕೋವಿಡ್ ಆಸ್ಪತ್ರೆ ಇತ್ಯಾದಿ ಕಡೆ ಉನ್ನತ ಮಟ್ಟದ ಚಿಕಿತ್ಸೆ ಒದಗಿಸಲಾಗುತ್ತಿದೆ. ರಾಜ್ಯ ಸರಕಾರ ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ದೂರದೃಷ್ಟಿಯೊಂದಿಗಿನ ಚಟುವಟಿಕೆಗಳು ಈ ಸಾಧನೆಗೆ ಪ್ರಧಾನ ಕಾರಣ.