ತಿರುವನಂತಪುರ: ಕೇರಳದಲ್ಲಿ ಗುರುವಾರದಿಂದ ಆರಂಭವಾದ ವಿಧಾನಸಭಾ ಅಧಿವೇಶನದ ಮೊದಲ ದಿನದ ಕಲಾಪ ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಕ್ಕೂಟದ ಸದಸ್ಯರ ಪ್ರತಿಭಟನೆ, ಸಭಾತ್ಯಾಗಕ್ಕೆ ಸಾಕ್ಷಿಯಾಯಿತು.
ಅರಣ್ಯ ಸಚಿವ ಎ. ಕೆ ಸಸೀಂದ್ರನ್ ಅವರು 'ಲೈಂಗಿಕ ಕಿರುಕುಳ ಪ್ರಕರಣ'ವೊಂದರ ಇತ್ಯರ್ಥಕ್ಕೆ ಯತ್ನಿಸಿದ್ದರು ಎನ್ನಲಾದ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್‌ಪಕ್ಷದ ಸದಸ್ಯರು ಒತ್ತಾಯಿಸಿತು. ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡದ ಸಭಾಧ್ಯಕ್ಷರ ಕ್ರಮದ ವಿರುದ್ಧ ಯುಡಿಎಫ್ ಸದಸ್ಯರು ಸಭಾತ್ಯಾಗ ಮಾಡಿದರು.
ಕಾಂಗ್ರೆಸ್ ಶಾಸಕ ಪಿ.ಸಿ.ವಿಷ್ಣುನಾಥ್ ನಿಲುವಳಿ ಸೂಚನೆ ಮಂಡಿಸಿದರು. ಇದಕ್ಕೆ ಸಭಾಧ್ಯಕ್ಷರು ನಿರಾಕರಿಸಿದಾಗ, ಯುಡಿಎಫ್ ಒಕ್ಕೂಟದ ಸದಸ್ಯರು ಕಲಾಪವನ್ನು ಬಹಿಷ್ಕರಿಸಿ ಸಭಾತ್ಯಾಗ ಮಾಡಿದರು.
ಕಾಂಗ್ರೆಸ್ ಶಾಸಕ ಪಿ ಸಿ ವಿಷ್ಣುನಾಥ್ ಅವರು ಮಂಡಿಸಿದ ನಿಲುವಳಿ ಸೂಚನೆಗೆ ಉತ್ತರಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್,'ಇದು ಪಕ್ಷಕ್ಕೆ ಸಂಬಂಧಿಸಿದ ವಿಷಯ ಎಂದು ಭಾವಿಸಿ ಮಧ್ಯಪ್ರವೇಶಿಸಿರುವುದಾಗಿ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ' ಎಂದು ಹೇಳಿದರು.
'ಈ ಪ್ರಕರಣದಲ್ಲಿರುವ ದೂರುದಾರರು ಮತ್ತು ಆರೋಪಿಗಳು ಇಬ್ಬರೂ ಎನ್‌ಸಿಪಿ ಪಕ್ಷದ ಕಾರ್ಯಕರ್ತರು. ಪಕ್ಷದ ನಾಯಕನಾಗಿ ಅವರು ಕಾರ್ಯಕರ್ತರ ನಡುವೆ ಉಂಟಾಗಿರುವ ಬಗ್ಗೆ ವಿವಾದ ಬಗ್ಗೆ ವಿಚಾರಿಸಿದ್ದಾರೆ' ಎಂದು ವಿಜಯನ್, ಸಚಿವರ ನಡೆಯನ್ನು ಸಮರ್ಥಿಸಿಕೊಂಡರು.
'ಈ ಪ್ರಕರಣದಲ್ಲಿ ಸಂತ್ರಸ್ತೆಯ ದೂರನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಪುನಃ ಸದನದಲ್ಲಿ ಈ ವಿಷಯವನ್ನು ಚರ್ಚಿಸುವ ಅಗತ್ಯವಿಲ್ಲ' ಎಂದು ಮುಖ್ಯಮಂತ್ರಿ ವಿಜಯನ್ ಸದನಕ್ಕೆ ತಿಳಿಸಿದರು.
ಇದಕ್ಕೂ ಮುನ್ನ, ಕಲಾಪ ಆರಂಭವಾದಾಗ ಅರಣ್ಯ ಸಚಿವರ ವಿಚಾರವನ್ನು ಪ್ರಸ್ತಾಪಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, 'ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದಲ್ಲಿ ಪ್ರಸಾರವಾದ ಧ್ವನಿಮುದ್ರಿಕೆ ತುಣುಕಿನಲ್ಲಿ ಪ್ರಕರಣದ ತನಿಖೆಯಲ್ಲಿ ಸಚಿವರು ಹಸ್ತಕ್ಷೇಪ ಮಾಡಿರುವುದು ಹಾಗೂ ಪ್ರಕರಣವನ್ನು ಇತ್ಯರ್ಥಗೊಳಿಸಲು ಸಂತ್ರಸ್ತೆಯ ತಂದೆಯನ್ನು ಕೇಳಿರುವುದು ಸ್ಪಷ್ಟವಾಗಿದೆ' ಎಂದು ಆರೋಪಿಸಿದರು.