ಉಪ್ಪಳ: ವಿವಿಧ ಕ್ಷೇತ್ರಗಳ ಕಲಾವಿದರು ಕೋವಿಡ್ ಅವಧಿಯಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಭಾನುವಾರ ಸಂಜೆ ಕಲಾವಿದರು/ ತತ್ಸಂಬಂಧಿ ವೃತ್ತಿ ನಿರತರ ಒಕ್ಕೂಟವಾದ ಸವಾಕ್(ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ ಆಫ್ ಕೇರಳ) ವತಿಯಿಂದ ರಾಜ್ಯಾದ್ಯಂತ "ಸಮರ ಭೂಮಿಕ"ಎಂಬ ಹೆಸರಿನಲ್ಲಿ ಧರಣಿ ಜರಗಿದ್ದು, ಸವಾಕ್ ಮಂಜೇಶ್ವರ ವಲಯ ಸಮಿತಿ ನೇತೃತ್ವದಲ್ಲಿ ಬಂದ್ಯೋಡು ಹಾಗೂ ಅಡ್ಕದಲ್ಲಿ ಪ್ರತಿಭಟನಾ ಧರಣಿ ನಡೆಯಿತು.
60 ವರ್ಷ ಪ್ರಾಯ ದಾಟಿದ ಕಲಾವಿದರಿಗೆ ಕಲ್ಯಾಣ ಮಂಡಳಿಯ ಪಿಂಚಣಿ ಯೋಜನೆಗೆ ಸೇರುವ ಅವಕಾಶ ನೀಡಬೇಕು, ಕೇಂದ್ರ-ರಾಜ್ಯ ಸರ್ಕಾರಗಳ ಪ್ರತ್ಯೇಕ ಪ್ಯಾಕೇಜ್ ಪ್ರಕಟಿಸಬೇಕು, ಕಲ್ಯಾಣ ಮಂಡಳಿಯ ಪಿಂಚಣಿಯನ್ನು 5000 ರೂ ಗೆ ಏರಿಸಬೇಕು, ಸಂಗೀತ ನಾಟಕ ಅಕಾಡಮಿಯ ಪಿಂಚಣಿ ಸೌಲಭ್ಯದಂತೆಯೇ ಕಲ್ಯಾಣ ಮಂಡಳಿಯ ಪಿಂಚಣಿಯನ್ನು ಏಕೀಕರಣಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿರಿಸಿ ಸವಾಕ್ ಸಂಘಟನೆ ಮಂಜೇಶ್ವರದಿಂದ ತಿರುವನಂತಪುರದ ವರೆಗೆ ಏಕಕಾಲಕ್ಕೆ ಧರಣಿ ನಡೆಸಿತು. ಕಲಾವಿದರು ತಮ್ಮ ತಮ್ಮ ವ್ಯಾಪ್ತಿ ಪ್ರದೇಶಗಳಲ್ಲಿ ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಲಾಪ್ರಸ್ತುತಿಗಳ ಸಹಿತ ತಮ್ಮ ಧ್ವನಿ ಎತ್ತಿ ಗಮನ ಸೆಳೆದರು.
ಸವಾಕ್ ಜಿಲ್ಲಾ ಸಮಿತಿ ಸದಸ್ಯೆ ಜಯಂತಿ ಸುವರ್ಣ ಅವರ ನೇತೃತ್ವದಲ್ಲಿ ಬಂದ್ಯೋಡಿನಲ್ಲಿ ನಡೆದ ಧರಣಿಯನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಕಿಶೋರ್ ಕುಮಾರ್ ಬಿ ಉದ್ಘಾಟಿಸಿದರು. ಮಮ್ಮುಞÂ್ಞ ಪಚ್ಚಂಬಳ, ರಕ್ಞಾ, ರಿತೇಶ್ ಕುಮಾರ್ ವಿವಿಧ ವೇಶಗಳನ್ನು ಧರಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿ ಧರಣಿಗೆ ಬೆಂಬಲ ಸೂಚಿಸಿದರು. ಸಂಗೀತ, ಹರಿಕೀರ್ತನೆ ಮೊದಲಾದವುಗಳ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದು ಗಮನ ಸೆಳೆಯಿತು. ಅಡ್ಕದಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ವರದ ಮಾಸ್ತರ್ ಉದ್ಘಾಟಿಸಿದರು.
ವರದರಾಜ ಭಂಡಾರಿ, ಜಯಣ್ಣ ಶೆಟ್ಟಿ, ಶ್ರೀನಿವಾಸ ಪೂಜಾರಿ, ಸತೀಶ್ ನಾಯ್ಕ್, ಮೋಹನ್ ಆಚಾರ್ಯ, ಮೊಹಮ್ಮದ್ ಕುಂಞÂ, ರಕ್ಷಾ, ರಿತೇಶ್ ಮೊದಲಾದವರು ಉಪಸ್ಥಿತರಿದ್ದರು. ಜಯಂತಿ ಸುವರ್ಣ ಸ್ವಾಗತಿಸಿ, ನಿರೂಪಿಸಿದರು.