ನವದೆಹಲಿ: ಬಕ್ರೀದ್ ಆಚರಣೆಗಾಗಿ ಕೇರಳ ಸರ್ಕಾರವು ಕೋವಿಡ್-19 ನಿಯಮಾವಳಿಗಳನ್ನು ಸಡಿಲಿಸಿರುವುದಕ್ಕೆ ಆಕ್ಷೇಪ ಎತ್ತಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), 'ಉತ್ತರಪ್ರದೇಶದ ಕನ್ವರ್ ಯಾತ್ರೆಯಂತೆಯೇ ಈ ಬಗ್ಗೆಯೂ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು' ಎಂದು ಒತ್ತಾಯಿಸಿದೆ.
'ಸಾರ್ವಜನಿಕ ಆಚರಣೆಗಾಗಿ ನೀಡಿರುವ ಈ ಅನುಮತಿಯನ್ನು ಕೇರಳ ಸರ್ಕಾರ ಹಿಂತೆಗೆದುಕೊಳ್ಳಬೇಕು' ಎಂದು ಭಾರತೀಯ ವೈದ್ಯಕೀಯ ಮಂಡಳಿಯು (ಐಎಂಎ) ಒತ್ತಾಯಿಸಿದೆ. ಒಂದು ವೇಳೆ ಅನುಮತಿ ಹಿಂಪಡೆಯದಿದ್ದರೆ ಸುಪ್ರೀಂ ಕೋರ್ಟ್ ಬಾಗಿಲು ತಟ್ಟುವುದಾಗಿಯೂ ಅದು ಎಚ್ಚರಿಸಿದೆ.
'ಸಾರ್ವಜನಿಕ ಸುರಕ್ಷತೆಗಾಗಿ ಉತ್ತರ ಪ್ರದೇಶ, ಉತ್ತರಾಖಂಡ, ಜಮ್ಮು-ಕಾಶ್ಮೀರದಂಥ ರಾಜ್ಯಗಳು ಸಾಂಪ್ರದಾಯಿಕವಾದ ಧಾರ್ಮಿಕ ಯಾತ್ರೆಗಳನ್ನು ರದ್ದುಗೊಳಿಸಿವೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿ ಬಕ್ರೀದ್ ಆಚರಣೆಗಾಗಿ ಕೇರಳ ಸರ್ಕಾರವು ತೆಗೆದುಕೊಂಡಿರುವ ಈ ನಿಲುವು ಅನಗತ್ಯವಾಗಿತ್ತು. ಸುಶಿಕ್ಷಿತರ ರಾಜ್ಯವಾಗಿರುವ ಕೇರಳವು ಇಂಥ ನಿರ್ಧಾರ ಕೈಗೊಂಡಿರುವುದು ದುರದೃಷ್ಟಕರ' ಎಂದು ಐಎಂಎನ ಅಧ್ಯಕ್ಷ ಡಾ. ಜೆ.ಎ. ಜಯಲಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಜಯೇಶ್ ಲೀಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು ಕೇರಳ ಸರ್ಕಾರದ ನಡೆಯನ್ನು ಖಂಡಿಸಿದ್ದು, ಇದು ಶೋಚನೀಯ ಸಂಗತಿ ಎಂದಿದ್ದಾರೆ.
'ಪ್ರಸ್ತುತ ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವ ಸಂದರ್ಭದಲ್ಲೇ ಕೇರಳ ಸರ್ಕಾರವು ಉದ್ದೇಶಪೂರ್ವಕವಾಗಿ ಬಕ್ರೀದ್ ಆಚರಣೆಗಾಗಿ ಮೂರು ದಿನಗಳ ಮಟ್ಟಿಗೆ ಕೋವಿಡ್ ನಿಯಮಗಳನ್ನು ಸಡಿಲಿಸಿರುವುದು ಸರಿಯಲ್ಲ. ಕನ್ವರ್ ಯಾತ್ರೆ ಮಾಡುವುದು ತಪ್ಪು ಎಂದಾದಲ್ಲಿ. ಸಾರ್ವಜನಿಕವಾಗಿ ಬಕ್ರೀದ್ ಆಚರಿಸುವುದು ಕೂಡಾ ತಪ್ಪು' ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಸಿಂಘ್ವಿ ಹೇಳಿದ್ದಾರೆ.
'ಕನ್ವರ್ ಯಾತ್ರೆ ಕುರಿತು ಸುಪ್ರೀಂ ಕೋರ್ಟ್ ಗಮನಿಸಿರುವ ಸಂಗತಿಗಳನ್ನು ನೆನಪಿಸಿದ ವಿಎಚ್‌ಪಿ ಕಾರ್ಯನಿರ್ವಾಹಕ ಅಧ್ಯಕ್ಷ ಅಲೋಕ್ ಕುಮಾರ್ ಅವರು, ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದರೂ ಅಲ್ಲಿನ ಸರ್ಕಾರವು ಬಕ್ರೀದ್‌ಗಾಗಿ ಕೋವಿಡ್ ನಿಯಮ ಸಡಿಲಿಸಿರುವುದು ಸರಿಯಲ್ಲ' ಎಂದು ದೂಷಿಸಿದ್ದಾರೆ.
'ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವ ಭರವಸೆ ಇದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.