ಮುಂಬೈ: ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರಿಗೆ ಭಾರತೀಯ ಸೇನೆ ಅತ್ಯುನ್ನತ ಗೌರವವನ್ನು ಸಲ್ಲಿಸಿದೆ. ಭಾರತೀಯ ಚಿತ್ರರಂಗಕ್ಕೆ ಇವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಇದರ ಜತೆಗೆ, ಕಾಶ್ಮೀರದ ಗುಲ್‌ಮಾರ್ಗ್‌ನಲ್ಲಿರುವ ಮಿಲಿಟರಿ ಫೈರಿಂಗ್ ರೇಂಜ್‌ಗೆ ವಿದ್ಯಾ ಬಾಲನ್ ಹೆಸರನ್ನು ಇಡಲಾಗಿದೆ. ಕೆಲ ತಿಂಗಳ ಹಿಂದೆ ಕಾಶ್ಮೀರದಲ್ಲಿ ಭಾರತೀಯ ಸೇನೆ ಆಯೋಜಿಸಿದ್ದ 'ಗುಲ್‌ಮಾರ್ಗ್ ವಿಂಟರ್ ಫೆಸ್ಟಿವಲ್'ನಲ್ಲಿ ಪತಿ ಸಿದ್ದಾರ್ಥ್ ರಾಯ್ ಕಪೂರ್ ಜತೆಗೆ ವಿದ್ಯಾ ಬಾಲನ್ ಭಾಗವಹಿಸಿದ್ದರು. ಇದು ಸೈನಿಕರು ಫೈರಿಂಗ್ ತರಬೇತಿ ಪಡೆಯುವ ಸ್ಥಳವಾಗಿದೆ. ಫೈರಿಂಗ್ ರೇಂಜ್‌ಗೆ ನಟಿಯ ಹೆಸರನ್ನಿಟ್ಟಿರುವುದು ಇದೇ ಮೊದಲು ಎನ್ನಲಾಗಿದೆ.
ಇತ್ತೀಚೆಗಷ್ಟೇ ವಿದ್ಯಾ ಬಾಲನ್ ಅಭಿನಯದ `ಶೆರ್ನಿ' ಸಿನಿಮಾ ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿದ್ದು, ಇದೀಗ ಭರ್ಜರಿ ಯಶಸ್ಸು ಕಾಣುತ್ತಿದೆ. ಈ ಚಿತ್ರದಲ್ಲಿ ವಿದ್ಯಾ ಅರಣ್ಯಾಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಇದರ ಬೆನ್ನಲ್ಲೇ ಆಸ್ಕರ್ ಆಡಳಿತ ಮಂಡಳಿಯ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಯಂಡ್ ಸೈನ್ಸ್‌ನಲ್ಲಿ ಕಾರ್ಯನಿರ್ವಾಹಕ ಸದಸ್ಯರ ಹೊಸ ಬ್ಯಾಚ್‍ಗೆ ಇವರು ಆಯ್ಕೆಯಾಗಿದ್ದರು. ನಿರ್ಮಾಪಕರಾದ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್‌ಗೂ ಆಹ್ವಾನ ಬಂದಿದೆ.
ವಿದ್ಯಾ ಬಾಲನ್ ಅವರಿಗೆ ವಿಶೇಷ ಗೌರವ ಸಿಕ್ಕಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ. ಆದರೆ ಈ ಬಗ್ಗೆ ವಿದ್ಯಾ ಬಾಲನ್ ಸದ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.