ತಿರುವನಂತಪುರಂ: ದೇಶದಲ್ಲಿ ಕೊರೊನಾ ಎರಡನೇ ಅಲೆ ಪ್ರಭಾವ ಕ್ಷೀಣಿಸಿ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ ಕೇರಳದಲ್ಲಿ ಮಾತ್ರ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ದಿನನಿತ್ಯದ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಸಾವಿನ ಪ್ರಮಾಣವೂ ತಗ್ಗಿಲ್ಲ.
ಈ ಕುರಿತು ಪ್ರಧಾನಿ ಕಚೇರಿ ಕಳವಳ ವ್ಯಕ್ತಪಡಿಸಿದೆ. ಕಳೆದ ಎಂಟು ವಾರಗಳಿಂದ ಕೇರಳದಲ್ಲಿ ಪಾಸಿಟಿವಿಟಿ ದರ 10.5% ಹಾಗೂ 14.8% ಇದೆ. ಮೇ ತಿಂಗಳ ಮಧ್ಯದವರೆಗೆ ಕೇರಳದಲ್ಲಿ ದಿನನಿತ್ಯ 43 ಸಾವಿರ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದವು. ನಂತರ ಜೂನ್ ಮೊದಲ ವಾರದವರೆಗೂ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಆದರೆ ಜೂನ್ ಮೂರನೇ ವಾರದಲ್ಲಿ ಏಕಾಏಕಿ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಇದುವರೆಗೂ ತಗ್ಗುವ ಲಕ್ಷಣಗಳು ಗೋಚರಿಸಿಲ್ಲ. ಜುಲೈ ತಿಂಗಳಿನಲ್ಲೂ ಕ್ರಮೇಣ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಸಾಗಿದೆ.
ದೇಶದಲ್ಲಿ ಒಟ್ಟಾರೆ ದಾಖಲಾಗುತ್ತಿರುವ ಕೊರೊನಾ ಪ್ರಕರಣಗಳ ಪೈಕಿ ಕೇರಳ ಹಾಗೂ ಮಹಾರಾಷ್ಟ್ರದ ಪಾಲೇ ಹೆಚ್ಚಿದೆ.
"ದೇಶದಲ್ಲಿ ಸದ್ಯ 40,03,000 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 1,50,000 ಸಕ್ರಿಯ ಪ್ರಕರಣಗಳು ಕೇರಳ ಒಂದರಲ್ಲೇ ಇದೆ. ಕೇರಳದಲ್ಲಿ ಕಳೆದ ಎಂಟು ವಾರಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 13% ಏರಿಕೆಯಾಗಿದೆ. ಸಾವಿನ ಪ್ರಮಾಣವೂ ತಗ್ಗಿಲ್ಲ. ದಿನನಿತ್ಯ ಅಂದಾಜು 97 ಮಂದಿ ಸಾವನ್ನಪ್ಪುತ್ತಿದ್ದಾರೆ" ಎಂದು ಕೇಂದ್ರ ಆತಂಕ ವ್ಯಕ್ತಪಡಿಸಿದೆ.
ಕೇರಳದಲ್ಲಿ ಅತಿ ಕಡಿಮೆ ಮಟ್ಟದಲ್ಲಿ ಸೆರೊ ಪ್ರಿವೆಲೆನ್ಸ್ (ಸೋಂಕಿಗೆ ವಿರುದ್ಧವಾಗಿ ಪ್ರತಿಕಾಯಗಳನ್ನು ಹೊಂದಿರುವ ಪ್ರಮಾಣ) 44.4% ದಾಖಲಾಗಿದೆ. ಗುರುವಾರ, ಕೇರಳಕ್ಕೆ ಕೊರೊನಾ ನಿಯಂತ್ರಣ ಸಂಬಂಧ ಕೇಂದ್ರ ಆರು ಸದಸ್ಯರ ತಂಡ ಕಳುಹಿಸಿದೆ. ಇದರೊಂದಿಗೆ ದೈನಂದಿನ ಕೋವಿಡ್ ಪ್ರಕರಣಗಳಲ್ಲಿ ಆತಂಕಕಾರಿಯಾದ ಹೆಚ್ಚಳ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈ ವಾರದಿಂದ ವಾರಾಂತ್ಯದ ಲಾಕ್‌ಡೌನ್ ಅನ್ನು ಸರ್ಕಾರ ವಿಸ್ತರಿಸಿದೆ.
ಕೇರಳದಲ್ಲಿ ಬುಧವಾರ 22,056 ಹೊಸ ಕೋವಿಡ್ ಪ್ರಕರಣಗಳು 33,27,301ಕ್ಕೆ ಏರಿದೆ. ಕೊರೊನಾ ಸೋಂಕಿಗೆ 31 ಮಂದಿ ಬಲಿಯಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 16,457 ಕ್ಕೆ ಏರಿಕೆಯಾಗಿದೆ.