ಕಾಸರಗೋಡು: ಜಿಲ್ಲೆಯ ನಾನಾ ಕಡೆ ಸ್ಥಳನಾಮಗಳು ಮಲಯಾಳೀಕರಣಗೊಳ್ಳುತ್ತಿದ್ದು, ಇದನ್ನು ಸರಿಪಡಿಸುವುದರ ಜತೆಗೆ ಕನ್ನಡ ಮಾಧ್ಯಮಕ್ಕೆ ಮಲಯಾಳ ಶಿಕ್ಷಕರ ನೇಮಕಾತಿ ತಡೆಹಿಡಿಯುವಂತೆ ಕರ್ನಾಟಕ ರಾಜ್ಯ ಬರಹಗಾರರ ಸಂಘ ಮತ್ತು ಕೇರಳ ರಾಜ್ಯ ಬರಹಗಾರರ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಜಿಲ್ಲೆಯ ಬಹುತೇಕ ಸ್ಥಳನಾಮ ಮಲಯಾಳೀಕರಣಗೊಂಡು ಅಲ್ಲಲ್ಲಿ ನಾಮಫಲಕವೂ ಅಳವಡಿಸಲಾಗಿದೆ. ಈ ತಪ್ಪನ್ನು ಸರಿಪಡಿಸಲು ಸರ್ಕಾರ ಮುಂದಾಗಬೇಕು. ಕಾಸರಗೋಡಿನ ಶಾಲೆಗಳಲ್ಲಿ ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕರ ನೇಮಕಾತಿ ಕೈಬಿಡಬೇಕು. ಎಲ್ಲ ಇಲಾಖೆಗಳಲ್ಲಿ ಕನ್ನಡಬಲ್ಲ ಅಧಿಕಾರಿಗಳನ್ನು ನೇಮಿಸುವುದರ ಜತೆಗೆ ಕನ್ನಡ ಭಾಷಾಂತರಗಾರರನ್ನು ನೇಮಿಸುವಂತೆ ನಿವೃತ್ತ ಶಿಕ್ಷಕ, ಬರಹಗಾರ ಜಿ.ವೀರೇಶ್ವರ ಭಟ್ ಕವರ್iರ್ಕರ್ ಒತ್ತಾಯಿಸಿದರು. ಬ್ಯಾಂಕ್, ಸರ್ಕಾರಿ ಕಚೇರಿಗಳಲ್ಲಿ ಕನ್ನಡ ನಾಮಫಲಕ ಅಳವಡಿಸಬೇಕು, ಸರ್ಕಾರದ ಸುತ್ತೋಲೆ ಕನ್ನಡದಲ್ಲೂ ಲಭ್ಯವಾಗುವಂತೆ ಮಾಡಬೇಕು, ಕನ್ನಡಿಗರ ಬಹುದಿನಗಳ ಬೇಡಿಕೆಯಾದ ಕನ್ನಡ ಅಕಾಡಮಿ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎಂದೂ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಯಪ್ರಕಾಶ್ ಶೆಟ್ಟಿ, ಮಂಜುನಾಥ ಮಾನ್ಯ ಉಪಸ್ಥಿತರಿದ್ದರು.