ನವದೆಹಲಿ: ಕೋವಿಡ್ ಚಿಕಿತ್ಸೆ ಔಷಧಗಳ ಅಕ್ರಮ ದಾಸ್ತಾನು, ವಿತರಣೆಗೆ ಸಂಬಂಧಿಸಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರ ಪ್ರತಿಷ್ಠಾನದ ವಿರುದ್ಧದ ತನಿಖೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರಿದ್ದ ಪೀಠವು, 'ಜನರು ಔಷಧಕ್ಕಾಗಿ ಪರಿತಪಿಸುತ್ತಿದ್ದ ವೇಳೆಯಲ್ಲಿ ಏಕಾಏಕಿ ಟ್ರಸ್ಟ್ ಮುಂದೆ ಬಂದು ಔಷಧ ಒದಗಿಸುವ ಭರವಸೆ ನೀಡುತ್ತದೆ' ಎಂದಿತು.
'ಇಂಥದ್ದು ಆಗಬಾರದು. ನಾವು ಈ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ' ಎಂದೂ ಹೇಳಿದ ಪೀಠವು, ಸೂಕ್ತ ಪರಿಹಾರಕ್ಕಾಗಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತು.
ಪ್ರತಿಷ್ಠಾನವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೈಲಾಶ್ ವಾಸುದೇವ್ ಅರ್ಜಿ ಸಲ್ಲಿಸಿದ್ದು, ಪೀಠದ ನಿರಾಕರಣೆಯನ್ನು ಗಮನಿಸಿ ನಂತರ ಅರ್ಜಿಯನ್ನು ಹಿಂತೆಗೆದುಕೊಂಡರು.