ನವದೆಹಲಿ : ಮಹತ್ವಾಕಾಂಕ್ಷೆಯ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್‌ನಡಿ ಅಭಿವೃದ್ಧಿಪಡಿಸಲಾಗುತ್ತಿರುವ ಯುಎಚ್‌ಐ (ಯುನಿಫೈಡ್ ಹೆಲ್ತ್ ಇಂಟರ್‌ಫೇಸ್) ವಿನ್ಯಾಸ ಹಾಗೂ ಸ್ವರೂಪ ಕುರಿತ ಕರಡನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಸಾರ್ವಜನಿಕರಿಂದ ಪ್ರತಿಕ್ರಿಯೆ ಆಹ್ವಾನಿಸಿದೆ.
'ಯುಎಚ್‌ಐ ಕುರಿತು ಜನರು ನೀಡುವ ಸಲಹೆ-ಸೂಚನೆಗಳನ್ನು ಕ್ರೋಡೀಕರಿಸಿ, ಈ ಇಂಟರ್‌ಫೇಸ್‌ಗೆ ಅಂತಿಮ ರೂಪ ನೀಡಲಾಗುವುದು' ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಶನಿವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಸಲಹೆ-ಸೂಚನೆಗಳನ್ನು ndhm@nha.gov.in ಇ-ಮೇಲ್ ಐಡಿಗೆ ಕಳುಹಿಸಬೇಕು. ಆಗಸ್ಟ್ 23 ಕೊನೆಯ ದಿನವಾಗಿದೆ.
ಡಿಜಿಟಲ್ ರೂಪದಲ್ಲಿ ಹಣ ಪಾವತಿಗಾಗಿ ರೂಪಿಸಿರುವ ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ರೀತಿಯಲ್ಲಿಯೇ ಯುಎಚ್‌ಐ (ಯುನಿಫೈಡ್ ಹೆಲ್ತ್ ಇಂಟರ್‌ಫೇಸ್) ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
'ಜನರಿಗೆ ಆರೋಗ್ಯ ಸೇವೆಗಳು ಸುಲಭವಾಗಿ, ಕೈಗೆಟಕುವ ದರದಲ್ಲಿ ಸಿಗಬೇಕು. ಈ ಸೇವೆಗಳು ಸಮರ್ಥವಾಗಿಯೂ ಇರಬೇಕು. ತಂತ್ರಜ್ಞಾನದ ನೆರವಿನ ಮೂಲಕ ಈ ಸೇವೆಗಳನ್ನು ಜನರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಅನ್ನು ಜಾರಿಗೊಳಿಸಲಾಗುತ್ತಿದೆ' ಎಂದು ಎನ್‌ಎಚ್‌ಎ ಸಿಇಒ ಡಾ.ಆರ್.ಎಸ್.ಶರ್ಮಾ ಹೇಳಿದ್ದಾರೆ.
ಕಳೆದ ವರ್ಷ ಘೋಷಣೆ: ಕಳೆದ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 'ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್' ಯೋಜನೆ ಘೋಷಿಸಿದರು.
ಯೋಜನೆಯಡಿ ಪ್ರತಿಯೊಬ್ಬ ಭಾರತೀಯನಿಗೂ ಹೆಲ್ತ್ ಐಡಿ ನೀಡಲಾಗುತ್ತದೆ. ವೈದ್ಯರು ಯಾವ ಔಷಧ ತೆಗದುಕೊಳ್ಳಲು ಸೂಚಿಸಿದ್ದಾರೆ, ಯಾವಾಗ ಅದನ್ನು ಸೂಚಿಸಲಾಗಿದೆ ಎಂಬ ಮಾಹಿತಿ ಜತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ವ್ಯಕ್ತಿಯ ಹೆಲ್ತ್ ಐಡಿಗೆ ಲಿಂಕ್ ಮಾಡಲಾಗುತ್ತದೆ.
ಎಂದು ಮೂಲಗಳು ಹೇಳಿವೆ.