ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಕರೆನ್ಸಿ ನೋಟುಗಳ ಮುದ್ರಣ ಯೋಜನೆ ಪ್ರಸ್ತಾವನೆ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದ್ದಾರೆ.
ಕರೆನ್ಸಿ ನೋಟು ಮುದ್ರಣದ ಕುರಿತ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರಿಸುತ್ತಿದ್ದರು. ಕೋವಿಡ್-19 ನಿಂದ ಉಂಟಾಗಿರುವ ಉದ್ಯೋಗ ನಷ್ಟವನ್ನು ತಪ್ಪಿಸಲು ಹಾಗೂ ಆರ್ಥಿಕತೆಗೆ ಚೇತರಿಕೆ ನೀಡಲು ಕರೆನ್ಸಿ ನೋಟುಗಳ ಮುದ್ರಣದ ಆಯ್ಕೆಯನ್ನು ಪರಿಗಣಿಸುವಂತೆ ಹಲವು ಅರ್ಥಶಾಸ್ತ್ರಜ್ಞರು ಮತ್ತು ತಜ್ಞರು ಸಲಹೆ ನೀಡಿದ್ದರು.
ಭಾರತದ ರಿಯಲ್ ಜಿಡಿಪಿ 2020-21 ರ ಅವಧಿಯಲ್ಲಿ ಶೇ.7.3 ರಷ್ಟು ಕುಸಿತ ಕಂಡಿರುವ ಅಂದಾಜಿದೆ ಎಂದು ಲೋಕಸಭೆಗೆ ವಿತ್ತ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. ಈ ಕುಸಿತ ಸಾಂಕ್ರಾಮಿಕದ ಪರಿಣಾಮ ಹಾಗೂ ಸಾಂಕ್ರಾಮಿಕವನ್ನು ತಡೆಗಟ್ಟುವುದಕ್ಕೆ ಕೈಗೊಂಡ ಕ್ರಮಗಳನ್ನು ಸೂಚಿಸುತ್ತವೆ ಎಂದೂ ಸಚಿವರು ಹೇಳಿದ್ದಾರೆ.
"ಆದರೆ ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಬಲಿಷ್ಠವಾಗಿದೆ. ಆತ್ಮ ನಿರ್ಭರ ಭಾರತ ಮಿಷನ್ 2020-21 ರ ಉತ್ತರಾರ್ಧದಲ್ಲಿ ಆರ್ಥಿಕತೆಯನ್ನು ಚೇತರಿಕೆಯ ಹಾದಿಯಲ್ಲಿಟ್ಟಿದೆ." ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಾಂಕ್ರಾಮಿಕದ ಪರಿಣಾಮವನ್ನು ತಡೆಗಟ್ಟಲು, 2020-21 ರ ಅವಧಿಯಲ್ಲಿ ಆರ್ಥಿಕ ಬೆಳವಣಿಗೆಗೆ ಪುನರುಜ್ಜೀವನ ನೀಡುವುದಕ್ಕಾಗಿ ಹಾಗೂ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಸರ್ಕಾರ 29.87 ಲಕ್ಷ ಕೋಟಿಯ ಸಮಗ್ರ ಪ್ಯಾಕೇಜ್ ನ್ನು ಘೋಷಿಸಿತ್ತು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.