ತಿರುವನಂತಪುರ: ನನ್ನನ್ನು ಸುಮಾರು 45 ದಿನಗಳ ಕಾಲ ಅವರು ಪ್ರಾಣಿಗಳ ಥರ ಕಾಡಿದರು, ಆಗ ಒಬ್ಬರೂ ಸಹಾಯಕ್ಕೆ ಬರಲಿಲ್ಲ. ನಾನು ರಾಜ್ಯವನ್ನು ತೊರೆಯುತ್ತಿದ್ದೇನೆ ಎಂದು ಯಾರೂ ತಪ್ಪು ತಿಳಿಯಬೇಡಿ, ಅವರೇ ನನ್ನನ್ನು ಹೊರಗೆ ಹಾಕಿದರು..'
- ಹೀಗೆಂದು ಕೋಟ್ಯಧಿಪತಿ ಉದ್ಯಮಿಯೊಬ್ಬರು ಸಂಕಟವನ್ನು ತೋಡಿಕೊಂಡಿದ್ದು, ಅವರೀಗ ಇನ್ನೊಂದು ರಾಜ್ಯದತ್ತ ಮುಖ ಮಾಡಿದ್ದು, ಅಲ್ಲಿಯೇ ಕೋಟಿಗಟ್ಟಲೆ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. ಅಷ್ಟಕ್ಕೂ ಅವರು ಹೀಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ಕೇರಳ ಸರ್ಕಾರದ ಕುರಿತು.
ಕೇರಳದ ಗಾರ್ಮೆಂಟ್ ಕ್ಷೇತ್ರದಲ್ಲಿನ ದೊಡ್ಡ ಹೆಸರಾಗಿರುವ 'ಕಿಟೆಕ್ಸ್' ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಾಬು ಎಂ. ಜಾಕೊಬ್ ಕೇರಳ ಸರ್ಕಾರದ ಕುರಿತು ಈ ರೀತಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತೆಲಂಗಾಣದಲ್ಲಿ ಸುಮಾರು 3,500 ಕೋಟಿ ರೂ. ಹೂಡಿಕೆ ನಡೆಸುವ ಕುರಿತು ಅಲ್ಲಿನ ಸರ್ಕಾರದ ಜತೆ ಮಾತುಕತೆ ನಡೆಸುವ ಸಲುವಾಗಿ ಹೊರಟಿದ್ದ ಅವರು, ವಿಮಾನನಿಲ್ದಾಣದಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ನಾನು 3,500 ಕೋಟಿ ರೂ. ಹೂಡಿಕೆಯನ್ನು ಹಿಂದೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದಾಗ ಕೇರಳ ಸರ್ಕಾರದಿಂದ ಒಬ್ಬರೂ ನನ್ನನ್ನು ಯಾಕೆ ಏನು ಎಂದು ಕೇಳಲಿಲ್ಲ. ಆದರೆ ಬೇರೆ 9 ರಾಜ್ಯಗಳ ಮುಖ್ಯಮಂತ್ರಿ, ಕೈಗಾರಿಕಾ ಮಂತ್ರಿಗಳಿಂದ ನನಗೆ ಕರೆಗಳು ಬಂದಿದ್ದವು. ಇವತ್ತು ನನಗೆ ತೆಲಂಗಾಣ ಸರ್ಕಾರದವರು ಮಾತುಕತೆಗೆ ಬರಲು ಪ್ರೈವೇಟ್ ಜೆಟ್ ಕಳುಹಿಸಿದ್ದಾರೆ. ನೆರೆಯ ರಾಜ್ಯಗಳು ಬದಲಾಗುತ್ತಿದ್ದರೂ, ಜಗತ್ತೇ ಬದಲಾಗುತ್ತಿದ್ದರೂ ಕೇರಳ ಇನ್ನೂ ಹಳೆಯ ಕಾಲದಲ್ಲೇ ಇದೆ ಎಂದ ಜಾಕೊಬ್, ಕೇರಳ ಸರ್ಕಾರ ತಮಗೆ ಕೊಟ್ಟ ಹಿಂಸೆಯನ್ನು ವಿವರಿಸಿದರು.
ನಾನಿವತ್ತು ತುಂಬಾ ದುಃಖಿತನಾಗಿದ್ದೇನೆ. ನೋವಲ್ಲಿರುವ ನನಗೆ ಬೇರೆ ದಾರಿ ಇಲ್ಲ. ಒಬ್ಬ ಉದ್ಯಮಿಗೆ ಮಾನಸಿಕ ಶಾಂತಿ ಮುಖ್ಯ, ಅದು ಇಲ್ಲಿಲ್ಲ. ಕಳೆದ 45 ದಿನಗಳಲ್ಲಿ ಅವರು ನನ್ನನ್ನು ಪ್ರಾಣಿಗಳ ರೀತಿ ಕಾಡಿದರು, ಆಗ ಯಾರೂ ನೆರವಿಗೆ ಬರಲಿಲ್ಲ. ನನ್ನ ಕಥೆ ಬಿಡಿ, ನಾನು ಹೇಗೋ ನಿಭಾಯಿಸುತ್ತೇನೆ. ಆದರೆ ಸಣ್ಣಪುಟ್ಟ ವ್ಯವಹಾರಸ್ಥರ ಪರಿಸ್ಥಿತಿ ತುಂಬಾ ಕಷ್ಟ. ಹೀಗೇ ಆದರೆ ಕೇರಳದಲ್ಲಿನ ಯುವಕರೆಲ್ಲ ಊರುಬಿಟ್ಟು, ಅದು ಹಿರಿಯನಾಗರಿಕರಷ್ಟೇ ಇರುವ ರಾಜ್ಯವಾದರೂ ಅಚ್ಚರಿ ಇಲ್ಲ ಎಂದು ಜಾಕೊಬ್ ಹೇಳಿಕೊಂಡಿದ್ದಾರೆ.