ತ್ರಿಶೂರ್ : 'ಭಾರತದ ಮೊದಲ ಕೋವಿಡ್ ರೋಗಿ, ವೈದ್ಯಕೀಯ ವಿದ್ಯಾರ್ಥಿನಿಗೆ ಮತ್ತೊಮ್ಮೆ ಸೋಂಕು ತಗುಲಿದೆ' ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದರು.
'ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ ಆಯಂಟಿಜನ್ ಪರೀಕ್ಷೆಯ ಫಲಿತಾಂಶವು ನೆಗೆಟಿವ್ ಬಂದಿತ್ತು' ಎಂದು ತ್ರಿಶೂರ್‌ನ ಡಿಎಂಆರ್ ಡಾ.ಕೆ.ಜೆ ರೀನಾ ಅವರು ಮಾಹಿತಿ ನೀಡಿದರು.
'ವಿದ್ಯಾಭ್ಯಾಸಕ್ಕೆಂದು ನವದೆಹಲಿಗೆ ತೆರಳಲು ಅವರು ಯೋಜನೆ ರೂಪಿಸಿದ್ದರು. ಇದಕ್ಕಾಗಿ ಅವರು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ಈ ವೇಳೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರಲ್ಲಿ ಸೋಂಕಿನ ಯಾವುದೇ ರೋಗಲಕ್ಷಣಗಳಿಲ್ಲ. ಸದ್ಯ ಅವರು ಮನೆಯಲ್ಲೇ ಪ್ರತ್ಯೇಕ ವಾಸವಾಗಿದ್ದಾರೆ. ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ' ಎಂದು ಅವರು ಹೇಳಿದರು.
ವುಹಾನ್ ವಿಶ್ವವಿದ್ಯಾಲಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿನಿ ಸೆಮಿಸ್ಟರ್ ರಜೆಯಲ್ಲಿ ಭಾರತಕ್ಕೆ ಮರಳಿದ್ದರು. 2020ರ ಜನವರಿ 30ರಂದು ಅವರಲ್ಲಿ ಸೋಂಕು ದೃಢಪಟ್ಟಿತ್ತು. ಇದು ಭಾರತದ ಪ್ರಥಮ ಕೋವಿಡ್ ಪ್ರಕರಣವಾಗಿತ್ತು. ಸುಮಾರು ಮೂರು ವಾರಗಳ ಚಿಕಿತ್ಸೆಯ ಬಳಿಕ ಅವರು ಸೋಂಕಿನಿಂದ ಗುಣಮುಖರಾಗಿದ್ದರು.