ನಾವು ಏನು ತಿನ್ನುತ್ತೇವೆ ಅದು ನಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಒಳ್ಳೆಯ ಆಹಾರ ತಿಂದರೆ ಆರೋಗ್ಯ ಉತ್ತಮವಾಗಿರುತ್ತದೆ, ಅನಾರೋಗ್ಯಕರ ಅಥವಾ ವಿಷಪೂರಿತ ಆಹಾರ ತಿಂದ್ರೆ ಆರೋಗ್ಯ ಹಾಳಾಗುವುದು. ಎಷ್ಟೋ ಬಾರಿ ನಮ್ಮ ಅರಿವಿಗೆ
ಬಾರದೆಯೇ ವಿಷಪೂರಿತ ಆಹಾರಗಳನ್ನು ಸೇವಿಸುತ್ತೇವೆ. ತರಕಾರಿ-ಹಣ್ಣುಗಳನ್ನು ನಾವೇ ಬೆಳೆದು ತಿನ್ನುವುದಾದರೆ ಅವುಗಳ ಗುಣಮಟ್ಟ ಉತ್ತಮವಾಗಿರುತ್ತದೆ. ಅದೇ ನಾವು ಮಾರುಕಟ್ಟೆಯಿಂದ ತರುವಾಗ ಅವುಗಳು ಫ್ರೆಶ್ ಇದೆಯೋ-ಇಲ್ವಾ ಎಂದು ಮಾತ್ರ ನೋಡುತ್ತೇವೆ.
ಅಷ್ಟು ಮಾತ್ರ ನೋಡಲು ಸಾಧ್ಯ, ಏಕೆಂದರೆ ನಮಗೆ ಅವುಗಳ ಗುಣಮಟ್ಟ ಆ ರೀತಿ ಮಾತ್ರ ತಿಳಿಯಲು ಸಾಧ್ಯ. ನಾವು ಖರೀದಿಸುವ ಪ್ರತಿಯೊಂದು ತರಕಾರಿಗಳಲ್ಲಿ ವಿಷಾಂಶ ಇದೆಯೇ, ಇಲ್ಲವೇ ಎಂದು ಪರೀಕ್ಷಿಸಿ ನೋಡಲು ಸಾಧ್ಯವೇ ಇಲ್ಲ, ಅವರು ಕೊಡುತ್ತಿರುವುದು ಉತ್ತಮ ತರಕಾರಿ ಹಾಗೂ ಹಣ್ಣುಗಳು ಎಂಬ ಭರವಸೆಯಿಂದ ಖರೀದಿ ಮಾಡುತ್ತೇವೆ.
ವೈರಲ್ ವೀಡಿಯೋ ತರಕಾರಿಗಳು ಕೆಡದಂತೆ ವ್ಯಾಪಾರಿ ರಾಸಾಯನಿಕಗಳನ್ನು ಸಿಂಪಡಿಸುತ್ತಾರೆ ಎಂಬ ದೂರು ಆಗಾಗ ಕೇಳಿ ಬರುತ್ತಲೇ ಇರುತ್ತವೆ, ಕೆಲವೊಂದು ವೀಡಿಯೋಗಳನ್ನು ನೋಡುತ್ತೇವೆ. ಈಗ ಅಂಥದ್ದೇ ಒಂದು ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ....ಬಾಡಿದ ಸೊಪ್ಬಾಡಿದ ಸೊಪನ್ನು ತಾಜಾವಾಗಿಸುವ ವಿಧಾನ ಬಾಡಿದ ಸೊಪ್ಪಿನ ಕಟ್ಟುಗಳನ್ನು ರಾಸಾಯನಿಕದಲ್ಲಿ ಮುಳುಗಿಸಿ ಮತ್ತೆ ತಾಜಾ ಸೊಪ್ಪುಗಳನ್ನಾಗಿ ಮಾಡುವ ವಿಧಾನವನ್ನು ವೀಡಿಯೋ ಮಾಡಿ ಹಾಕಲಾಗಿದ್ದು ಈ ವೀಡಿಯೋ ನೋಡಿದವರು ಅಬ್ಬಾ ಇಂಥ ಆಹಾರ ತಿಂದ್ರೆ ನಮ್ಮ ಆರೋಗ್ಯದ ಗತಿಯೇನು ಎಂದು ಬೆಚ್ಚಿ ಬೀಳದೆ ಇರಲ್ಲ. ಆ ಸೊಪ್ಪು ನೋಡಿದಾಗ ನೋಡುಗರಿಗೆ ಅದರಲ್ಲಿ ವಿಷಕಾರಕ ರಾಸಾಯನಿಕವಿದೆ ಎಂಬ ಸುಳಿವು ಒಂದಿಷ್ಟೂ ಬರಲ್ಲ.
ವೀಡಿಯೋದಲ್ಲಿ ಏನಿದೆ? ಸಾಮಾಜಿಕ ಜಾಲ ತಾಣದಲ್ಲಿ ಕಂಡು ಬರುತ್ತಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಒಂದು ಪ್ಲಾಸ್ಟಿಕ್ ಪಾತ್ರೆಯಲ್ಲಿ ಕೆಮಿಕಲ್ ಕಲಿಸಿರುತ್ತಾನೆ. ಅವನ ಮುಂದೆ ಮೂರು ಕಟ್ಟು ಬಾಡಿದ ಸೊಪ್ಪಿನ ಕಟ್ಟುಗಳಿರುತ್ತವೆ. ಆ ಸೊಪ್ಪಿನ ಕಟ್ಟುಗಳನ್ನು ನೋಡಿದಾಗ ಯಾರೊಬ್ಬರೂ ಫ್ರೀ ಕೊಟ್ಟರೂ ತಗೊಳಲ್ಲ, ಆ ರೀತಿ ಬಾಡಿರುತ್ತದೆ. ಆ ಸೊಪ್ಪುಗಳಲ್ಲಿ ಒಂದು ಕಟ್ಟನ್ನು ನೀರಿನಲ್ಲಿ ಮುಳುಗಿಸಿ ಇಡಲಾಗುವುದು, ಮತ್ತೆರಡು ಕಟ್ಟು ಸೊಪ್ಪನ್ನು ರಾಸಾಯನಿಕದಲ್ಲಿ ಮುಳುಗಿಸಿ ಇಡಲಾಗುವುದು . ಸ್ವಲ್ಪ ಹೊತ್ತಿನಲ್ಲಿಯೇ ಆ ಸೊಪ್ಪಿನ ಕಟ್ಟುಗಳು ತುಂಬಾ ತಾಜಾವಾಗಿ ಕಾಣುವುದು. ಈಗಷ್ಟೇ ಹೊಲದಿಂದ ಕುಯ್ದು ತಂದಂತೆ ಕಾಣುವುದು, ಅವುಗಳನ್ನು ನೋಡಿದವರು ಯಾರಾದರೂ ಖರೀದಿ ಮಾಡುವುದು ಗ್ಯಾರಂಟಿ. ಈ ವೀಡಿಯೋ ನೋಡಿದವರು ಅಬ್ಬಾ... ಇಂಥ ಆಹಾರಗಳನ್ನು ತಿಂದ್ರೆ ದೇವರು ಕೂಡ ಕಾಪಾಡಲು ಸಾಧ್ಯವಿಲ್ಲ ಎಂದು ಬೆಚ್ಚಿ ಬೀಳುವಂತಾಗಿದೆ.
ಹೊರಗಡೆಯಿಂದ ಸೊಪ್ಪು-ತರಕಾರಿ ತಂದ್ರೆ ಏನು ಮಾಡಬೇಕು? * ನಾವು ಹೊರಗಡೆಯಿಂದ ಹಣ್ಣು-ತರಕಾರಿಗಳನ್ನು ಕೊಂಡು ತಂದಾ ಗ ಹರಿಯುವ ನೀರಿನಲ್ಲಿ (ಟ್ಯಾಪ್ ನೀಡಿನಲ್ಲಿ) ತೊಳೆಯಿರಿ, ನಂತರ ಅರ್ಧ ಬಕೆಟ್ ನೀರಿಗೆ ಆ ತರಕಾರಿಗಳನ್ನು ಹಾಕಿ, ಸ್ವಲ್ಪ ಬಿಟ್ಟು ತೆಗೆದು ಅದರ ನೀರು ಹೋಗುವಂತೆ ಹರಡಿ ಇಡಿ, ಸೊಪ್ಪಾದರೆ ನೀರು ಹೋಗಲು ಕೆಳಗಡೆ ತೂತ-ತೂತ ಇರುವ ಪಾತ್ರೆಯಲ್ಲಿಡಿ. * ನೀರಿಗೆ ಸ್ವಲ್ಪ ವಿನೆಗರ್ ಹಾಕಿ ಅದರನ್ನು ಸೊಪ್ಪು-ತರಕಾರಿಗಳನ್ನು ಹಾಕಿಟ್ಟು ತೊಳೆಯಿರಿ. * ಇನ್ನು ಮೀನು ತಂದಾಗ ಕೂಡ ಅದರಲ್ಲಿ ರಾಸಾಯನಿಕ ಸಿಂಪಡಿಸಿದ್ದರೆ ಅದನ್ನು ತೆಗೆಯಲು ಮೀನನ್ನು ವಿನೆಗರ್ ಹಾಕಿದ ನೀರಿನಲ್ಲಿ ಸ್ವಲ್ಪ ಹೊತ್ತು ಹಾಕಿಡಿ. ಒಂದೋ ನಾವು ಆಹಾರ ಬೆಳೆಯಬೇಕು ಆಗ ಯಾವುದೇ ಭಯವಿಲ್ಲದೆ ಆಹಾರ ಸೇವಿಸಬಹುದು, ಅದು ಸಾಧ್ಯವಾಗದಿದ್ದಾಗ ಹೊರಗಡೆಯಿಂದ ತಂದ ಆಹಾರಗಳನ್ನು ಚೆನ್ನಾಗಿ ತೊಳೆದು ಬಳಸಬೇಕು. ಆಗ ಸ್ವಲ್ಪ ಮಟ್ಟಿಗೆ ನಮ್ಮ ಆರೋಗ್ಯ ಕಾಪಾಡಬಹುದು.