ಟೋಕಿಯೋ: ಟೋಕಿಯೋ ಒಲಂಪಿಕ್ಸ್ ಉದ್ಘಾಟನಾ ಸಮಾರಂಭದ ಪರೇಡ್ ನಲ್ಲಿ ಭಾರತೀಯ ದಳವನ್ನು ವಿಶ್ವಚಾಂಪಿಯನ್ ಮೇರಿ ಕೋಮ್ ಹಾಗೂ ಪುರುಷರ ಹಾಕಿ ವಿಭಾಗದ ನಾಯಕ ಮನ್ಪ್ರೀತ್ ಸಿಂಗ್ ಮುನ್ನಡೆಸಿದ್ದಾರೆ.
ಭಾರತೀಯ ಕ್ರೀಡಾಪಟುಗಳ ತಂಡ ಒಲಂಪಿಕ್ಸ್ ಕ್ರೀಡಾಂಗಣ ಪ್ರವೇಶಿಸುತ್ತಿದ್ದಂತೆಯೇ ಕೇಂದ್ರ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಭಾರತದ ಧ್ವಜವನ್ನು ಪ್ರದರ್ಶಿಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿದರು.
ಕೋವಿಡ್-19 ಆತಂಕಗಳ ನಡುವೆಯೇ ಜಪಾನ್ ನ ರಾಜಧಾನಿಯಲ್ಲಿ 25 ಸದಸ್ಯರನ್ನೊಳಗೊಂಡ ಭಾರತೀಯ ತಂಡ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿತ್ತು.
ಶುಕ್ರವಾರದ ಸಂಜೆ ನಡೆದ ಸಮಾರಂಭದಲ್ಲಿ ಭಾಗಿಯಾಗಿದ್ದವರ ಪೈಕಿ ಅಂಕಿತ ರೈನಾ ಅವರನ್ನು ಕ್ರೀಡಾಪಟುಗಳ ಪಟ್ಟಿಗೆ ಸೇರಿಸಲಾಗಿದ್ದು, ಟೇಬಲ್ ಟೆನ್ನೀಸ್ ತಂಡದಿಂದ ಮನಿಕಾ ಬಾತ್ರ ಹಾಗೂ ಶರತ್ ಕಮಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಅಮಿತ್, ಆಶಿಶ್ ಕುಮಾರ್, ಮೇರಿ ಕೋಮ್ ಅವರು ಭಾರತದ 6 ಅಧಿಕಾರಿಗಳು ಹಾಗೂ 8 ಬಾಕ್ಸರ್ ಗಳೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕೋವಿಡ್-19 ಆತಂಕದ ಹಿನ್ನೆಲೆಯಲ್ಲಿ ಟೊಕಿಯೋ ಒಲಂಪಿಕ್ಸ್ ನ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಆದರೆ ಅಂತಿಮವಾಗಿ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಹಲವು ಕ್ರೀಡಾಪಟುಗಳು ಐಸೊಲೇಷನ್ ನಲ್ಲಿದ್ದುಕೊಂಡೇ ತರಬೇತಿ/ ಅಭ್ಯಾಸವನ್ನು ಮುಂದುವರೆಸಿದ್ದಾರೆ.