ಬೀಜಿಂಗ್: ಕರೊನಾ ತವರು ಚೀನಾದ ವುಹಾನ್ನ ಲ್ಯಾಬ್ ಎಂಬುದು ಇದಾಗಲೇ ಹಲವಾರು ಅಧ್ಯಯನಗಳಿಂದ ಬಹಿರಂಗಗೊಂಡಿದೆ. ಆದರೆ ಚೀನಾ ಮಾತ್ರ ತನಗೂ ಕರೊನಾಕ್ಕೂ ಸಂಬಂಧವೇ ಇಲ್ಲ ಎನ್ನುತ್ತಲೇ ಬಂದಿದೆ.
ಇದೇ ಕಾರಣಕ್ಕೆ, ಕರೊನಾದ ಮೂಲ ಯಾವುದು, ಇದರ ರಹಸ್ಯ ಏನು ಎಂಬುದನ್ನು ತಿಳಿಯಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದ್ದು, ಇದೀಗ ಚೀನಾದ ಕೆಂಗಣ್ಣಿಗೆ ಗುರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ವುಹಾನ್ ಲ್ಯಾಬ್ ಪರಿಶೀಲನೆಗೆ ಮುಂದಾಗಿದ್ದು, ಈ ನಡೆಯನ್ನು ಚೀನಾ ವಿರೋಧಿಸಿದೆ. ಇದು ವಿಜ್ಞಾನಕ್ಕೆ ಮಾಡುತ್ತಿರುವ ಅಪಮಾನ ಎಂದು ಹೇಳಿದೆ.
ಈ ಮೊದಲು ಕೂಡ ವಿಶ್ವ ಸಂಸ್ಥೆ ಚೀನಾ ಮತ್ತು ವುಹಾನ್ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸುವ ಪ್ರಸ್ತಾವ ಇಟ್ಟಿತ್ತು. ಆದರೆ ಚೀನಾ ಅದನ್ನು ವಿರೋಧಿಸಿತ್ತು. ಇದೀಗ ಎರಡನೇ ಬಾರಿಗೆ ಪ್ರಯೋಗಾಲಯದಲ್ಲಿ ಪರಿಶೀಲನೆ ನಡೆಸುವ ಪ್ರಸ್ತಾವ ಇಡುತ್ತಲೇ ಚೀನಾ ಗರಂ ಆಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಈ ಆದೇಶ ಅಥವಾ ಪ್ರಸ್ತಾವವನ್ನು ನಾವು ಪಾಲನೆ ಮಾಡಲ್ಲ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಉಪಾಧ್ಯಕ್ಷ ಜೆಂಗ್ ಯೆಕ್ಸಿನ್ ಹೇಳಿದ್ದಾರೆ.
ಕೇವಲ ಲ್ಯಾಬ್ ಲೀಕ್ ಥೇರಿ ಮೇಲೆ ತನಿಖೆ ನಡೆಸೋದು ವಿಜ್ಞಾನಕ್ಕೆ ಮಾಡಿದ ಅಪಮಾನ ಆಗಲಿದೆ ಎಂದು ಯೆಕ್ಸಿನ್ ಆಕ್ರೋಶ ಹೊರ ಹಾಕಿದ್ದಾರೆ. ಜತೆಗೆ, ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಲ್ಲ ಅನ್ನೋದು ನಮ್ಮ ನಂಬಿಕೆ ಎಂದೂ ಯೆಕ್ಸಿನ್ ಹೇಳಿ ಕರೊನಾಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸಾಬೀತು ಮಾಡಲು ಹೊರಟಿದ್ದಾರೆ.