ನವದೆಹಲಿ: ಯಾವುದೇ ಧರ್ಮವಾದರೂ ಎಲ್ಲಾ ಭಾರತೀಯರ ಡಿಎನ್ಎ ಒಂದೇ. ಇಲ್ಲಿ ನಾವು ಹಿಂದು ಅಥವಾ ಮುಸ್ಲಿಂ ಎಂದು ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ. ನಾವು ಭಾರತೀಯರು ಅನ್ನೋ ಪ್ರಾಬಲ್ಯ ಇರಲಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಆರ್‌ಎಸ್‌ಎಸ್‌ನ ಮುಸ್ಲಿಂ ರಾಷ್ಟ್ರೀಯ ಮಂಚ್ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಹತ್ವದ ಸಂದೇಶ ನೀಡಿದ್ದಾರೆ. 40,000 ವರ್ಷಗಳ ಹಿಂದಿನ ಪೂರ್ವಜರ ವಂಶವೇ ನಮ್ಮದು. ಇದು ಭಾರತೀಯರ ಡಿಎನ್ ಎ ಪರೀಕ್ಷೆಯಲ್ಲಿ ಸಾಬೀತಾಗಿದೆ. ಧರ್ಮ ಯಾವುದೇ ಆದರೂ ನಮ್ಮ ಡಿಎನ್ ಎ ಒಂದೇ ಆಗಿದೆ ಎಂದಿದ್ದಾರೆ.
ಮುಸ್ಲಿಮರು ಇಲ್ಲಿ ಇರಕೂಡದು ಎಂದು ಯಾರಾದರು ಹೇಳಿದರೆ ಅಂತಹ ವ್ಯಕ್ತಿ ಹಿಂದೂವೇ ಅಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಹಿಂದೂ ಮತ್ತು ಮುಸ್ಲಿಂ ನಡುವಣ ಉತ್ತಮ ಬಾಂಧವ್ಯಕ್ಕೆ ಪ್ರಬಲ ಸಂದೇಶ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಹಿಂದೂಗಳು ಅಥವಾ ಮುಸ್ಲಿಮರು ಒಬ್ಬರ ಮೇಲೊಬ್ಬರು ಪ್ರಾಬಲ್ಯ ಸಾಧಿಸುವಂತಿರಬಾರದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ರಾಜಕೀಯಕ್ಕೆ ಕೆಲ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಇದರಲ್ಲಿ ಪ್ರಮುಖವಾಗಿ, ರಾಜಕೀಯಕ್ಕೆ ಜನರನ್ನು ಒಗ್ಗೂಡಿಸಲು ಸಾಧ್ಯವಿಲ್ಲ. ಆದರೆ ರಾಜಕೀಯ ಏಕತೆಯನ್ನು ವಿರೂಪಗೊಳಿಸುವ ಅಸ್ತ್ರವಾಗಬಹುದು ಎಂದಿದ್ದಾರೆ.
ಗೋವು ಪವಿತ್ರವಾದ ಪ್ರಾಣಿ. ಆದರೆ ಬೇರೆಯವರನ್ನು ಹತ್ಯೆ ಮಾಡಲು ಪ್ರಯತ್ನಿಸುತ್ತಿರುವವರು ಹಿಂದುತ್ವದ ವಿರುದ್ಧ ಹೋಗುತ್ತಿದ್ದಾರೆ. ಅಂತಹವರ ವಿರುದ್ಧ ಪಕ್ಷಪಾತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಭಾರತದಲ್ಲಿ ಇಸ್ಲಾಂ ಅಪಾಯದಲ್ಲಿದೆ ಎಂಬ ಖೆಡ್ಡಕ್ಕೆ ಯಾರೂ ಬೀಳಬಾರದು. ಹಿಂದೂ-ಮುಸ್ಲಿಂ ಏಕತೆಯ ಹೆಸರಲ್ಲಿ ಮೊದಲು ಹಿಂದೂಗಳು ಮತ್ತು ಮುಸ್ಲಿಮರು ಒಂದೇ ಆಗಿದ್ದರು ಎಂಬ ದಾರಿತಪ್ಪಿಸುವ ಹೇಳಿಕೆಗಳಿಗೆ ಕಿವಿಕೊಡಬಾರದು. ಧರ್ಮವನ್ನು ಹೊರತು ಪಡಿಸಿ ಭಾರತೀಯರೆಲ್ಲರ ಡಿಎನ್‌ಎಗಳು ಒಂದೇ. ಆಚರಣೆಯ ಆಧಾರದಲ್ಲಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಭಾಗವತ್ ಪ್ರತಿಪಾಧಿಸಿದ್ದಾರೆ.
ಹಿಂಸಾಚಾರದಲ್ಲಿ ತೊಡಗುವವರು ಹಿಂದುತ್ವಕ್ಕೆ ವಿರುದ್ಧವಾಗಿದ್ದಾರೆ. ದೇಶದಲ್ಲಿ ಏಕತೆ ಅತೀ ಅಗತ್ಯ. ಏಕತೆ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಏಕತೆಗೆ ಮಾತುಕತೆ, ನಂಬಿಕೆ ಅಗತ್ಯ. ಆದರೆ ಭಾರತದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂಬ ಊಹೆಗಳಲ್ಲಿ ಸಿಲುಕಬೇಡಿ ಎಂದು ಮೋಹನ್ ಭಾಗವತ್ ಹೇಳಿದರು. ಮುಸ್ಲಿಮ್ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಗೆ ಇಮೇಜ್ ಮೇಕ್ ಓವರ್ ಮಾಡುವ ಅಗತ್ಯವಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಇಮೇಜ್ ಮೇಕ್ ಓವರ್ ಅಥವಾ ಮತಗಳ ಅಗತ್ಯವಿಲ್ಲ. ಸಂಘವು ರಾಷ್ಟ್ರವನ್ನು ಬಲಪಡಿಸಲು ಮತ್ತು ಸಮಾಜದ ಎಲ್ಲರ ಕಲ್ಯಾಣಕ್ಕಾಗಿ ತನ್ನ ಕೆಲಸವನ್ನು ಮಾಡುತ್ತಲೇ ಇದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.