ಪಾಲಕ್ಕಾಡ್: ಕೇರಳದಲ್ಲಿ ಮೊದಲ ಬಾರಿಗೆ ಅಲತ್ತೂರ್ ನ ಪ್ರಣವ್(22) ಎಂಬವರು ಕಾಲುಗಳ ಮೂಲಕ ಕೊರೋನಾ ಲಸಿಕೆ ಪಡೆದರು. ಎರಡೂ ಕೈಗಳಿಲ್ಲದೆ ಜನಿಸಿದ ಪ್ರಣವ್ ಅಲತ್ತೂರ್ ಗ್ರಾಮ ಪಂಚಾಯಿತಿಯ ವಿಶೇಷ ಅನುಮತಿಯೊಂದಿಗೆ ಕಾಲಿನ ಮೂಲಕ ಲಸಿಕೆ ಪಡೆದರು. ಕೇರಳದಲ್ಲಿ ಇಂತಹ ಮೊದಲ ಲಸಿಕೆ ಇದಾಗಿದೆ.
ಪ್ರಣವ್ ತಮ್ಮ ಬೈಸಿಕಲ್ ಮೂಲಕ ಅಲತ್ತೂರ್ ಹಳೆಯ ಪೋಲೀಸ್ ಠಾಣೆಯಲ್ಲಿರುವ ವ್ಯಾಕ್ಸಿನೇಷನ್ ಕೇಂದ್ರಕ್ಕೆ ಆಗಮಿಸಿದರು. ಅವರ ತಂದೆ ಬಾಲಸುಬ್ರಮಣಿಯನ್ ಉಪಸ್ಥಿತರಿದ್ದರು. ಪ್ರಣವ್ ಅವರ ದೇಹಕ್ಕೆ ಲಸಿಕೆ ಎಲ್ಲಿ ಚುಚ್ಚಬೇಕು ಎಂಬ ಬಗ್ಗೆ ಆರೋಗ್ಯ ಕಾರ್ಯಕರ್ತರಿಗೆ ಆರಂಭದಲ್ಲಿ ಸಂಶಯವಿತ್ತು. ಆದರೆ ಆರೋಗ್ಯ ತಜ್ಞರ ಸಲಹೆಯ ಮೇರೆಗೆ ಆತನ ಕಾಲಿಗೆ ಚುಚ್ಚಲಾಯಿತು.
ಕೋವಿಶೀಲ್ಡ್ ಲಸಿಕೆಯ ಮೊದಲ ಪ್ರಮಾಣವನ್ನು ಸ್ವೀಕರಿಸಿ ಅರ್ಧ ಘಂಟೆಯವರೆಗೆ ವೀಕ್ಷಣೆಗೊಳಪಡಿಸಿದ ಬಳಿಕ ಪ್ರಣವ್ ಬೈಸಿಕಲ್‍ನಲ್ಲಿ ಮನೆಗೆ ಮರಳಿದರು. ವ್ಯಾಕ್ಸಿನೇಷನ್ ವಿರುದ್ಧದ ನಕಲಿ ಅಭಿಯಾನಕ್ಕೆ ಎದುರಾಗಿ ತನ್ನದು ಮಾದರಿ ವ್ಯಾಕ್ಸಿನೇಷನ್ ಪ್ರತಿಕ್ರಿಯೆಯಾಗಿದೆ ಎಂದು ಪ್ರಣವ್ ಹೇಳಿದರು. ಈ ರೀತಿಯಲ್ಲಿ ಕೊರೋನಾ ಲಸಿಕೆ ವಿತರಿಸಿರುವುದು ವಿರಳ ಎಂದು ಆರೋಗ್ಯ ಇಲಾಖೆ ಪ್ರತಿಕ್ರಿಯಿಸಿತು.