ನವದೆಹಲಿ: ನಮ್ಮ ದೇಶದಲ್ಲಿ 'ಶ್ರೀಮಂತರು, ಸಂಪದ್ಭರಿತರು, ರಾಜಕೀಯ ಅಧಿಕಾರ ನಡೆಸುವವರ ಪರ ಹಾಗೂ ನ್ಯಾಯ ಕೇಳಲು ಶಕ್ತಿ ಇಲ್ಲದ, ಸಂಪನ್ಮೂಲ ರಹಿತ ಬಡವರ ಪರ' ಎಂಬ ಎರಡು ಸಮನಾಂತರ ಕಾನೂನು ವ್ಯವಸ್ಥೆಗಳಿಲ್ಲ' ಎಂದು ಸುಪ್ರೀಂ ಕೋರ್ಟ್ ಗುರುವಾರ ತಿಳಿಸಿದೆ.
'ಕೆಳಹಂತದ ನ್ಯಾಯಾಲಯಗಳು ವಸಾಹತು ಶಾಹಿ ಮನಸ್ಥಿತಿ ಹಿಡಿತಕ್ಕೆ ಸಿಲುಕಿ ನಲುಗುತ್ತವೆ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರ ವಿಶ್ವಾಸ ಉಳಿಸಿಕೊಳ್ಳಬೇಕೆಂದರೆ ಇದು ಬದಲಾಗಬೇಕು. ಸತ್ಯದ ಪರ ನಿಂತ ನ್ಯಾಯಾಧೀಶರು ಕೆಂಗಣ್ಣಿಗೆ ಗುರಿಯಾಗುವುದಿದೆ' ಎಂದು ಸುಪ್ರೀಂ ಕೋರ್ಟ್ ಹೇಳಿತು.
ಎರಡು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ದೇವೇಂದ್ರ ಚೌರಾಸಿಯಾ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಬಿಎಸ್‌ಪಿ ಶಾಸಕಿಯ ಪತಿಯ ಜಾಮೀನು ರದ್ದುಗೊಳಿಸಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಇಂಥ ಗಂಭೀರವಾದ ವಿಚಾರಗಳನ್ನು ಅವಲೋಕಿಸಿತು.
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಷಾ ಅವರನ್ನೊಳಗೊಂಡ ನ್ಯಾಯಪೀಠ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು.
'ಸ್ವತಂತ್ರ ಮತ್ತು ನಿಷ್ಪಕ್ಷಪಾತ ನ್ಯಾಯಾಂಗವು ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ. ಇದು ರಾಜಕೀಯ ಒತ್ತಡಗಳು ಮತ್ತು ಪರಿಗಣನೆಗಳಿಂದ ಮುಕ್ತವಾಗಿರಬೇಕು' ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
ನ್ಯಾಯಾಂಗದ ಬಗ್ಗೆ ಜನರಲ್ಲಿರುವ ನಂಬಿಕೆಯನ್ನು ಉಳಿಸಬೇಕಾದರೆ, ಕೆಳಹಂತದ ನ್ಯಾಯಾಂಗ ವ್ಯವಸ್ಥೆ ಬಗ್ಗೆ ಗಮನ ಹರಿಸಬೇಕಾಗುತ್ತದೆ ಎಂದು ಪೀಠ ಹೇಳಿತು.