ಕಾಸರಗೋಡು: ಎಡರಂಗ ಸರ್ಕಾರದ ಭ್ರಷ್ಟಾಚಾರದಿಂದ ಕೂಡಿದ ಆಡಳಿತಕ್ಕೆದುರಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ಅಂಗವಾಗಿ ಕಾಸರಗೋಡು ಬ್ಲಾಕ್ ಕಚೇರಿ ಮುಂಭಾಗದಲ್ಲಿ ಪರಿಶಿಷ್ಟ ಜಾತಿ ಮೋರ್ಚಾ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂಪತ್ ಪೆರ್ನಡ್ಕ ಧರಣಿ ಉದ್ಘಾಟಿಸಿ ಮಾತನಾಡಿ, ಸರ್ಕಾರ ಪರಿಶಿಷ್ಟ ಜಾತಿ ಪಂಗಡಗಳ ವಿದ್ಯಾರ್ಥಿಗಳಿಗೆ ಕಲಿಕೋಪಕರಣ, ಸ್ಟೈಪಂಡ್ ನೀಡುವಲ್ಲಿ ತಾರತಮ್ಯ ಧೋರಣೆ ತಳೆಯುತ್ತಿದ್ದು, ಈ ವಲಯಕ್ಕೆ ಮೀಸಲಿರಿಸಿರುವ ಮೊತ್ತವನ್ನು ದುರುಪಯೋಗಪಡಿಸುತ್ತಿರುವುದಾಗಿ ಆರೋಪಿಸಿದರು. ಎಸ್ ಸಿ ಮೋರ್ಚಾ ಜಲ್ಲಾ ಸಮಿತಿ ಉಪಾಧ್ಯಕ್ಷ ಹರಿಶ್ಚಂದ್ರ ಪುತ್ತಿಗೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಿಜೆಪಿ ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ ಮಾತನಾಡಿ ಕೇರಳ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದ ಜನತೆಯನ್ನು ಫಟ್ ಬ್ಯಾಂಕ್‍ಗಳನ್ನಾಗಿ ಬಳಸುವುದನ್ನು ಬಿಟ್ಟು ಅವರಿಗಿರುವ ಎಲ್ಲಾ ಸವಲತ್ತುಗಳನ್ನೂ ಶೀಘ್ರವಾಗಿ ವಿತರಿಸಬೇಕೆಂದು ಒತ್ತಾಯಿಸಿದರು.
ಮಧೂರು ಪಂಚಾಯಿತಿ ಪ್ರತಿನಿಧಿ ಉದಯಕುಮಾರ್, ಬಿಯಂಎಸ್ ಕಾರ್ಯಕರ್ತ ಸುರೇಶ್ ಮಜಲ್, ಕುಂಬ್ಡಾಜೆ ಪಂಚಾಯಿತಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಘು ಮಾಚಾವು ಉಪಸ್ಥಿತರಿದ್ದರು. ಎಸ್ ಸಿ ಮೋರ್ಚಾ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ನಾರಾಯಣ.ಪಿ ಪೆರಡಾಲ ಸ್ವಾಗತಿಸಿದರು. ಕೋಶಾಧಿಕಾರಿ ಮಣಿ ನೆಲ್ಕಳ ವಂದಿಸಿದರು.