ನವದೆಹಲಿ: 'ಕೋವಿಡ್-19 ಪಿಡುಗು ತಂದಿಟ್ಟ ಸಂಕಷ್ಟ ರಾಜಕೀಯ ವಿಷಯವಲ್ಲ. ಅದು ಮಾನವೀಯ ನೆಲೆಯಲ್ಲಿ ಎದುರಿಸಬೇಕಾದ ಸಮಸ್ಯೆ' ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, 'ಕೋವಿಡ್ ಪಿಡುಗಿನ ಸಂದರ್ಭದಲ್ಲಿ ದೇಶದ ಯಾವೊಬ್ಬ ಪ್ರಜೆಯೂ ಹಸಿವಿನಿಂದ ಬಳಲದಂತೆ ಸರ್ಕಾರ ಕ್ರಮ ಕೈಗೊಂಡಿದೆ' ಎಂದು ಹೇಳಿದರು.
ಸಭೆಯ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, 'ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಬಡವರು ಹಸಿವಿನಿಂದ ಬಳಲದಂತೆ ಸರ್ಕಾರ ನೋಡಿಕೊಳ್ಳುತ್ತಿದೆ ಎಂಬುದಾಗಿ ಹೇಳಿದರು' ಎಂದು ತಿಳಿಸಿದರು.
'ಬಹಳ ವರ್ಷಗಳ ನಂತರ ಜಗತ್ತು ಇಂಥ ಪಿಡುಗನ್ನು ಎದುರಿಸುತ್ತಿದೆ. ದೇಶದ ಬೃಹತ್ ಸಂಖ್ಯೆಯ ಜನರಿಗೆ ಪಡಿತರ ವಿತರಿಸಲಾಗಿದೆ. ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದು ಬಿಜೆಪಿ ಸಂಸದರ ಜವಾಬ್ದಾರಿಯಾಗಿದೆ. ಅದು ಜನತೆಗೆ ಅವರು ಮಾಡುತ್ತಿರುವ ಉಪಕಾರವಲ್ಲ ಎಂಬುದನ್ನು ಪ್ರಧಾನಿ ಸ್ಪಷ್ಟವಾಗಿ ಹೇಳಿದರು' ಎಂದೂ ಜೋಶಿ ತಿಳಿಸಿದರು.
'ಕೋವಿಡ್ ಪಿಡುಗಿನ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಡೆದುಕೊಳ್ಳುತ್ತಿರುವ ರೀತಿ ಬಗ್ಗೆ ಮೋದಿ ಕಳವಳ ವ್ಯಕ್ತಪಡಿಸಿದರು. ಅದರಲ್ಲೂ, ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬರುವ ಬಗ್ಗೆ ಇನ್ನೂ ನಂಬಿಕೆ ಇಟ್ಟುಕೊಂಡಿದೆ ಎಂಬುದಾಗಿ ಹೇಳಿದರು' ಎಂದೂ ಸಚಿವ ಜೋಶಿ ತಿಳಿಸಿದರು.
'ಕೋವಿಡ್ ನಿರ್ವಹಣೆ ಹಾಗೂ ಲಸಿಕೆ ಲಭ್ಯತೆ ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಯಾರಾಗಿವೆ. ವಿರೋಧ ಪಕ್ಷಗಳು ಮಾಡುವ ಆರೋಪಗಳಿಗೆ ಪಕ್ಷದ ಸಂಸದರು ತಕ್ಕ ಉತ್ತರ ನೀಡಬೇಕು ಎಂಬುದಾಗಿ ಮೋದಿ ಸೂಚಿಸಿದರು' ಎಂದು ಮೂಲಗಳು ಹೇಳಿವೆ.