ನವದೆಹಲಿ: ಟ್ವಿಟರ್ ನಲ್ಲಿ ಇಸ್ಲಾಮೋಫೋಬಿಕ್ ಪೋಸ್ಟ್ ಗಳು ಪ್ರಕಟಗೊಳ್ಳುತ್ತಿರುವುದರ ಬಗ್ಗೆ ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
"ಕಳೆದ ವರ್ಷ ಕೋವಿಡ್-19 ಎದುರಾದ ಹೊಸತರಲ್ಲಿ ದೆಹಲಿಯಲ್ಲಿ ನಡೆದಿದ್ದ ತಬ್ಲಿಘಿ ಜಮಾತ್ ನ ಬೃಹತ್ ಸಮಾವೇಶದ ನಂತರ ಟ್ವಿಟರ್ ನಲ್ಲಿ ಇಸ್ಲಾಮೋಫೋಬಿಕ್ ಪೋಸ್ಟ್ ಗಳು ಪ್ರಕಟಗೊಂಡಿದ್ದವು. ಈ ಹಿನ್ನೆಲೆಯಲ್ಲಿ ಟ್ವಿಟರ್ ವಿರುದ್ಧ ಸಿಬಿಐ ಅಥವಾ ಎನ್‌ಐಎ ತನಿಖೆಯಾಗಬೇಕು, ಇಸ್ಲಾಮೋಫೋಬಿಕ್ ಪೋಸ್ಟ್ ಗಳೂ ಸೇರಿದಂತೆ ಯಾವುದೇ ಧರ್ಮದ ಸಮುದಾಯದ ವಿರುದ್ಧ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವುದರ ವಿರುದ್ಧ ಐಟಿ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು" ಎಂದು ಮನವಿ ಮಾಡಿ ವಕೀಲ ಖಾಜ ಐಜಾಜುದ್ದೀನ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. '
ಈ ಸಂಬಂಧ ವಿಡಿಯೋ ಕಾನ್ಫರೆನ್ಸ್ ನ ಮೂಲಕ ನಡೆದ ಕಲಾಪದಲ್ಲಿ, "ನೀವು ಕೇಂದ್ರ ಸರ್ಕಾರದ ಹೊಸ ಐಟಿ ಕಾನೂನುಗಳನ್ನು ಅಧ್ಯಯನ ಮಾಡಿದ್ದೀರಾ?" ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಎನ್ ವಿ ರಮಣ ಹಾಗೂ ನ್ಯಾ. ಎ.ಎಸ್ ಬೋಪಣ್ಣ ಅವರಿದ್ದ ಪೀಠ ಪ್ರಶ್ನಿಸಿದೆ.
ಹೊಸ ಐಟಿ ಕಾನೂನನ್ನು ಐಜಾಜುದ್ದೀನ್ ಓದಲು ಪ್ರಾರಂಭಿಸಿದ ಬೆನ್ನಲ್ಲೇ, ಅರ್ಜಿ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡುತ್ತಿರುವುದಾಗಿಯೂ ಅಷ್ಟರಲ್ಲಿ ಅರ್ಜಿದಾರರು ಹೊಸ ಕಾನೂನನ್ನು ಅಧ್ಯಯನ ಮಾಡಿ ಸಿದ್ಧರಾಗಿ ಬರಬೇಕಾಗಿಯೂ" ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮೊದಲಿಗೆ ಐಜಾಜುದ್ದೀನ್ ಅವರು ತಮ್ಮ ಅರ್ಜಿಯನ್ನು ತಲಂಗಾಣ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದರು. ಏ.22 ರಂದು ತೆಲಂಗಾಣ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಹಾಗೂ ಪರಿಹಾರ ಕಂಡುಕೊಳ್ಳಲು ಸುಪ್ರೀಂ ಕೋರ್ಟ್ ಮೊರೆ ಹೋಗಬಹುದೆಂದು ಸೂಚಿಸಿತ್ತು.
ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವ ಬದಲು, ಈ ಅರ್ಜಿಯನ್ನು ಕೇಂದ್ರ ಸರ್ಕಾರ ಪರಿಗಣಿಸಬಹುದು ಎಂದಷ್ಟೇ ಹೇಳಿತ್ತು, ತೆಲಂಗಾಣ ಹೈಕೋರ್ಟ್ ಕೇಂದ್ರಕ್ಕೆ ಸ್ಪಷ್ಟ ನಿರ್ದೇಶನಗಳನ್ನು ನೀಡಿಲ್ಲ ಎಂದೂ ಐಜಾಜುದ್ದೀನ್ ವಾದಿಸಿದ್ದಾರೆ.