ನವದೆಹಲಿ: ಶಿಕ್ಷಕರ ನೇಮಕಾತಿ ಹಗರಣ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಹರಿಯಾಣ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಲಾ ಅವರು ತಿಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಕಾರಾಗೃಹದ ನಿಯಮಗಳ ಔಪಚಾರಿಕತೆಗಳನ್ನು ಪೂರೈಸಿದ ನಂತರ ಶುಕ್ರವಾರ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
86 ವರ್ಷದ ಚೌಟಲಾ ಈಗಾಗಲೇ ಪೆರೋಲ್ ಮೇಲೆ ಹೊರಗಿದ್ದರು, ಶುಕ್ರವಾರ ಔಪಚಾರಿಕ ನಿಯಮಗಳನ್ನು ಪೂರೈಸಿ ಬಿಡುಗಡೆ ಮಾಡಲಾಯಿತು.,
ಕೋವಿಡ್ ಹಿನ್ನೆಲೆಯಲ್ಲಿ ಒಂಬತ್ತುವರೆ ವರ್ಷ ಜೈಲು ವಾಸ ಪೂರೈಸಿದ ಕೈದಿಗಳಿಗೆ ಆರು ತಿಂಗಳ ವಿನಾಯಿತಿ ನೀಡುವಂತೆ ಕಳೆದ ವರ್ಷ ದೆಹಲಿ ಸರ್ಕಾರ ಆದೇಶ ಹೊರಡಿಸಿತ್ತು, ಅದರಂತೆ ಬಿಡುಗಡೆ ಮಾಡಿದ್ದೇವೆ ಎಂದು ಕಾರಾಗೃಹ ಐಜಿಪಿ ಸಂದೀಪ್ ಗೋಯೆಲ್ ತಿಳಿಸಿದ್ದಾರೆ.
ಓಂಪ್ರಕಾಶ್ ಚೌಟಲಾ ಅವರು ಈಗಾಗಲೇ 9 ವರ್ಷ 9 ತಿಂಗಳು ಜೈಲುವಾಸ ಪೂರ್ಣಗೊಳಿಸಿದ್ದಾರೆ, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅವರು 2013 ರಲ್ಲಿ ಜೈಲು ಸೇರಿದ್ದರು.