ಕೋಲ್ಕತ್ತ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಹಾಗೂ ಕಾಂಗ್ರೆಸ್ ನ ಮಾಜಿ ಸಂಸದ ಅಭಿಜಿತ್ ಮುಖರ್ಜಿ ಜು.05 ರಂದು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನ ಜಂಗಿಪುರ್ ಕ್ಷೇತ್ರದಿಂದ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ಅಭಿಜಿತ್ ಮುಖರ್ಜಿ, ಪಕ್ಷಾಂತರದ ವಿಷಯವಾಗಿ ಕಳೆದ ಕೆಲವು ವಾರಗಳಿಂದ ಟಿಎಂಸಿ ಜೊತೆ ಮಾತುಕತೆ ನಡೆಸುತ್ತಿದ್ದರು.
ಲೋಕಸಭೆಯಲ್ಲಿ ಟಿಎಂಸಿಯ ನಾಯಕ ಸುದೀಪ್ ಬಂಡೋಪಾಧ್ಯಾಯ ನೇತೃತ್ವದಲ್ಲಿ ಅಭಿಜಿತ್ ಮುಖರ್ಜಿ ಟಿಎಸಿಗೆ ಸೇರ್ಪಡೆಗೊಂಡಿದ್ದು, ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಪಶ್ಚಿಮ ಬಂಗಾಳದಲ್ಲಿ ದೀದಿ ಬ್ರೇಕ್ ಹಾಕಿದ್ದಾರೆ. ದೇಶದಲ್ಲಿ ಈಗ ದೀದಿ ಅತ್ಯಂತ ಸಮರ್ಥವಾದ ಜಾತ್ಯಾತೀತ ನಾಯಕಿಯಾಗಿದ್ದು, ಕೋಮುವಾದಿ ಬಿಜೆಪಿಯ ವಿರುದ್ಧ ಸೆಣೆಸಬಲ್ಲವರಾಗಿದ್ದಾರೆ, ನಾನು ಒಂದು ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುವುದಕ್ಕಾಗಿ ಮತ್ತೊಂದು ಕಾಂಗ್ರೆಸ್ ನ್ನು ಬಿಟ್ಟಿದ್ದೇನೆ, ನಾವು ಬಿಜೆಪಿಯನ್ನು ಸೋಲಿಸುತ್ತೇವೆ ಎಂಬುದು ಖಾತ್ರಿ ಎಂದು ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.
"ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಸಂಪರ್ಕದಲ್ಲಿದ್ದೆ. ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಮಾಡಿದ್ದರೆ ಹುದ್ದೆಗಾಗಿ ಪಕ್ಷಾಂತರ ಮಾಡಿದ್ದೆ ಎಂಬ ಆರೋಪ ಬರುತ್ತಿತ್ತು. ನಾನು ಯಾವುದೇ ಹುದ್ದೆಗಳಿಗೆ ಆಸೆಪಡುವುದಿಲ್ಲ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ" ಎಂದು ಅಭಿಜಿತ್ ಮುಖರ್ಜಿ ಹೇಳಿದ್ದಾರೆ.