ನವದೆಹಲಿ: ಇದೇ ಆಗಸ್ಟ್ ತಿಂಗಳಿನಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಲಿದೆ ಎಂಬ ಎಸ್‌ಬಿಐ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್, ಅಲೆ ಎಂಬುದು ಸವಾಲಲ್ಲ ಎಂದು ಹೇಳಿದ್ದಾರೆ.
"ವ್ಯವಸ್ಥೆ ಹೇಗೆ ನಡೆಯುತ್ತಿದೆ ಎಂಬುದರ ವಾಸ್ತವಿಕ ವಿಶ್ಲೇಷಣೆ ಈ ಅಲೆಗಳು. ಮಾನವ ಹಾಗೂ ಸೋಂಕಿನ ನಡುವಿನ ಸಂವಹನವನ್ನೇ ಅಲೆ ಎನ್ನಬಹುದು. ಅಲೆಗಳು ಬರುತ್ತವೆ, ವೈರಸ್ ರೂಪಾಂತರಗೊಳ್ಳುತ್ತದೆ. ಜನರು ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ ಹಾಗೂ ಅಲೆಯ ಪ್ರಭಾವವು ಈ ಎಲ್ಲಾ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಅಗರ್‌ವಾಲ್ ಹೇಳಿದ್ದಾರೆ.
"ನಮ್ಮ ಮುಂದಿನ ಮೊದಲ ಸವಾಲೆಂದರೆ, ಕೊರೊನಾ ಎರಡನೇ ಅಲೆ ಇನ್ನೂ ಅಂತಿಮಗೊಂಡಿಲ್ಲ ಎಂಬುದು. ಅದರ ಮುಂದಿನ ಸವಾಲು ಮಾನವನ ನಡವಳಿಕೆ. ನಮ್ಮ ನಡವಳಿಕೆಯಿಂದ ಹೇಗೆ ಸೋಂಕನ್ನು ದೂರವಿರಿಸುತ್ತೇವೆ ಎಂಬುದು ನಮ್ಮ ಮುಂದಿನ ಮುಖ್ಯ ಸವಾಲು" ಎಂದು ಹೇಳಿದ್ದಾರೆ.
ಮುಂದಿನ ಅಲೆ ಬರುತ್ತದೆ ಎಂಬುದರ ಕುರಿತು ಗಮನ ನೀಡುವ ಬದಲು ಸ್ಥಳೀಯ ಮಟ್ಟದಲ್ಲಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಕುರಿತು ಗಮನ ಹರಿಸಬೇಕು. ಯಾವುದೇ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚು ದಾಖಲಾದರೆ, ತಕ್ಷಣವೇ ನಿರ್ಬಂಧ ಹೇರುವ ಮೂಲಕ ಸೋಂಕನ್ನು ನಿಯಂತ್ರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಕೊರೊನಾ ಅಲೆಗಳ ಸಾಧ್ಯತೆಗಳ ಕುರಿತು ಚರ್ಚಿಸುವ ಬದಲು ಕ್ರಮಗಳ ಕುರಿತು ಚಿಂತನೆ ನಡೆಸಬೇಕಿದೆ. ಈಶಾನ್ಯ ರಾಜ್ಯಗಳಲ್ಲಿ ಇನ್ನೂ ಕೊರೊನಾ ಕಡಿಮೆಯಾಗಿಲ್ಲ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಎಚ್ಚರಿಕೆ ನೀಡಿದ್ದಾರೆ.