ಕಾನ್ಪುರ್: ಪಾಕಿಸ್ತಾನದ ಯಾವುದೇ ದುರಾತ್ಮಕ ಪ್ರಯತ್ನ ಇಲ್ಲವೇ ಅದರ ತಂತ್ರಜ್ಞಾನವನ್ನು ಎದುರಿಸಲು ಭಾರತ ಸಮರ್ಥವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಇತ್ತೀಚಿನ ಜಮ್ಮು ವಾಯುಪಡೆ ನೆಲೆಯ ಮೇಲೆ ನಡೆದ ಡ್ರೋಣ್ ದಾಳಿಯ ಕುರಿತು ಪ್ರತಿಕ್ರಿಯಿಸಿ ತಿಳಿಸಿದ್ದಾರೆ.
ಡ್ರೋನ್ ದಾಳಿಗಳ ಕುರಿತು ಭಾರತ ಅತ್ಯಾಧುನಿಕ ರೀತಿಯಲ್ಲಿ ಕಾರ್ಯಮಗ್ನವಾಗಿದ್ದು, ಗಡಿಯಲ್ಲಿ ಕಟ್ಟುನಿಟ್ಟಿನ ಎಚ್ಚರ ವಹಿಸಲಾಗಿದೆ ಎಂದರು. ಮೂರನೇ ಬಾರಿ ಸರ್ಜಿಕಲ್ ದಾಳಿ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭಾರತೀಯ ಸೇನೆ ಸದಾ ಕಟ್ಟೆಚ್ಚರದಿಂದ ಇದ್ದು, ಗಡಿಗಳು ಸಂಪೂರ್ಣ ಸುರಕ್ಷಿತವಾಗಿವೆ ಎಂದು ಹೇಳಿದ್ದಾರೆ.
ಪ್ರತಿಪಕ್ಷಗಳ ಹೇಳಿಕೆಗಳ ಕುರಿತು ಪ್ರತಿಕ್ರಿಸಿದ ರಾಜನಾಥ್ ಸಿಂಗ್, ಕೆಲವರು ಭೀತಿಯ ರಾಜಕಾರಣದಲ್ಲಿ ತೊಡಗಿದ್ದಾರೆ. ಆದರೆ, ಇಂತಹ ರಾಜಕಾರಣ ಮಾಡುವವರರು ಎಂದಿಗೂ ಯಶಸ್ವಿಯಾಗಲಾರರು ಎಂದರು.
ಸಬ್ ಕ ಸಾತ್, ಸಬ್ ಕ ವಿಶ್ವಾಸ್ ನಲ್ಲಿ ಬಿಜೆಪಿ ವಿಶ್ವಾಸವಿಟ್ಟಿದೆ. ಹಿಂದೂ ಅಥವಾ ಮುಸ್ಲೀಂ ಎಂಬ ರೀತಿಯಲ್ಲಿ ಬಿಜೆಪಿ ಎಂದೂ ನಡೆದುಕೊಂಡಿಲ್ಲ. ಉತ್ತರ ಪ್ರದೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಭಾರಿಸಲಿದೆ ಎಂಬುದಕ್ಕೆ ಇತ್ತೀಚಿನ ಪಂಚಾಯತ್ ಚುನಾವಣೆಗಳು ನಿದರ್ಶನವಾಗಿವೆ ಎಂದು ಅಂದು ರಾಜನಾಥ್ ಸಿಂಗ್ ಹೇಳಿದ್ದಾರೆ.