ನವದೆಹಲಿ: ಪೆಗಾಸಸ್ ಹಗರಣ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಇಸ್ರೇಲ್ ನಲ್ಲಿ ಈ ಸಂಬಂಧ ತನಿಖೆ ಪ್ರಾರಂಭವಾಗಿದೆ.
ಸೈಬರ್ ಸೆಕ್ಯುರಿಟಿ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ನ ಉತ್ಪನ್ನವಾಗಿರುವ ಸ್ಪೈವೇರ್ ನ್ನು ಸರ್ಕಾರಿ ಕ್ಲೈಂಟ್ ಗಳು ಬಳಕೆ ಮಾಡಿರುವ ಬಗ್ಗೆ ಎನ್‌ಎಸ್‌ಒ ಕಚೇರಿಗೆ ತನಿಖಾ ತಂಡ ಭೇಟಿ ನೀಡಿದೆ. ಈ ಬೆಳವಣಿಗೆ ಸಂಬಂಧ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರವ ಅಲ್ಲಿನ ಸಕ್ರಾರ ತನಿಖೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ರಕ್ಷಣಾ ಸಚಿವಾಲಯದ ರಫ್ತಿ ನಿಯಂತ್ರಣ ವಿಭಾಗ ಹಾಗೂ ರಾಷ್ಟ್ರೀಯ ಭದ್ರತಾ ಪರಿಷತ್ ನ ಅಧಿಕಾರಿಗಳಿಗೆ ಅಗತ್ಯವಿರುವಲ್ಲಿ ತನಿಖೆ ನಡೆಸುವುದಕ್ಕೂ ಅಧಿಕಾರವಿದ್ದು, ಎನ್‌ಎಸ್‌ಒ ವಿರುದ್ಧ ಪೆಗಾಸಸ್ ಸ್ಪೈವೇರ್ ಗೆ ಸಂಬಂಧಿಸಿದ ತನಿಖೆ ಪ್ರಾರಂಭಗೊಂಡಿದೆ.
ರಕ್ಷಣಾ ಸಚಿವಾಲಯದ ರಫ್ತು ನಿಯಂತ್ರಕ ವಿಭಾಗದಿಂದ ಸಂಸ್ಥೆಗೆ ನೀಡಲಾಗಿರುವ ಅನುಮತಿಗಳು ಮತ್ತು ಅಧಿಕಾರಗಳ ಅನುಗುಣವಾಗಿ ಕಾರ್ಯನಿರ್ವಹಿಸಿದೆಯೇ ಇಲ್ಲವೇ ಎಂಬುದರ ಮೇಲೆ ತನಿಖೆ ಕೇಂದ್ರೀಕೃತವಾಗಿದೆ. ಎನ್‌ಎಸ್‌ಒವನ್ನು ಪ್ರತಿನಿಧಿಸುವ ಮರ್ಕ್ಯುರಿ ಪಬ್ಲಿಕ್ ಅಫೇರ್ಸ್ ಸಂಸ್ಥೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಇಸ್ರೇಲ್ ನ ರಕ್ಷಣಾ ಸಚಿವಾಲಯದ ಪ್ರತಿನಿಧಿಗಳು ನಮ್ಮ ಕಚೇರಿಗೆ ಭೇಟಿ ನೀಡಿದ್ದರು, ನಾವು ಅವರ ತಪಾಸಣೆಯನ್ನು ಸ್ವಾಗತಿಸುತ್ತೇವೆ" ಎಂದಷ್ಟೇ ಹೇಳಿದೆ.
ಸಂಸ್ಥೆ ಅಧಿಕಾರಿಗಳೊಂದಿಗೆ ಪಾರದರ್ಶಕವಾಗಿದೆ. ಸಂಸ್ಥೆಯ ವಿರುದ್ಧ ನಿರಂತರವಾಗಿ ಕೇಳಿಬಂದಿರುವ ಆರೋಪಗಳ ವಿರುದ್ಧ ನಾವು ನೀಡಿರುವ ವಾಸ್ತವಾಂಶಗಳನ್ನು ಈ ತಪಾಸಣೆ ಸಾಬೀತುಪಡಿಸುತ್ತದೆ" ಎಂದು ಸಂಸ್ಥೆ ಹೇಳಿದೆ.