ಲಕ್ನೋ: ಲಕ್ನೋದಲ್ಲಿ ಭಾರಿ ಸ್ಫೋಟಕ್ಕೆ ಯತ್ನಿಸಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಸಂಚು ವಿಫಲವಾಗಿದೆ. ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ(ಎಟಿಎಸ್)ದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸಜೀವ ಬಾಂಬ್ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದಾರೆ. ಜೊತೆಗೆ ಸರಣಿ ಆತ್ಮಹತ್ಯಾ ದಾಳಿಗೆ ಮುಂದಾಗಿದ್ದ ಉಗ್ರ ಪಡೆಯ ಜಾಲದ ಕೊಂಡಿಯನ್ನು ಕತ್ತರಿಸಿದ್ದಾರೆ.
ಲಕ್ನೋದ ಜನನಿಬಿಡ ಪ್ರದೇಶಗಳಲ್ಲಿ ಆತ್ಮಾಹುತಿ ದಾಳಿ ನಡೆಸಲು ಅಲ್ ಖೈದಾ ಸಂಘಟನೆ ಸದಸ್ಯರು ಸಜ್ಜಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ಎಟಿಎಸ್ ಸಿಬ್ಬಂದಿ ಲಕ್ನೋದ ನಿವಾಸವೊಂದರ ಮೇಲೆ ದಾಳಿ ನಡೆಸಿ, ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
''ಬಂಧಿತರನ್ನು ಮಿನಾಜ್ ಅಹ್ಮದ್ ಹಾಗೂ ನಾಸಿರುದ್ದೀನ್ ಎಂದು ಗುರುತಿಸಲಾಗಿದ್ದು, ಇಬ್ಬರು ಲಕ್ನೋದ ಕಕೋರಿ ಪ್ರದೇಶದ ನಿವಾಸಿಗಳಾಗಿದ್ದು, ಅಲ್ ಖೈದಾ ಅನ್ಸಾರ್ ಖಜ್ವಾತ್ ಉಲ್ ಹಿಂದ್ ಸಂಘಟನೆಯ ಆತ್ಮಾಹುತಿ ದಾಳಿಯ ಸದಸ್ಯರಾಗಿದ್ದಾರೆ, ಉಳಿದ ಉಗ್ರರನ್ನು ಹಿಡಿಯಲು ಬಲೆ ಬೀಸಲಾಗಿದೆ,'' ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಲಕ್ನೋ ಸೇರಿದಂತೆ ಉತ್ತರ ಪ್ರದೇಶದ ಪ್ರಮುಖ ಪಟ್ಟಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹರ್ದೋಯಿ, ಸೀತಾಪುರ್, ಬಾರಾಬಂಕಿ, ಉನ್ನಾವೋ ಹಾಗೂ ರಾಯ್ ಬರೇಲಿ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದ್ದು, ಭದ್ರತೆ ಹೆಚ್ಚಿಸಲಾಗಿದೆ.
''ಬಂಧಿತರು ನೆಲೆಸಿದ್ದ ಮನೆಯಲ್ಲಿ ಇನ್ನೂ ಐದು ಮಂದಿ ಇದ್ದರು ಎಂದು ತಿಳಿದು ಬಂದಿದೆ. ಆ ಮನೆಯಲ್ಲಿದ್ದ ಪಿಸ್ತೂಲ್ , ಎರಡು ಪ್ರೆಷರ್ ಕುಕ್ಕರ್ ಬಾಂಬ್, ಸ್ಫೋಟಕ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಸಜೀವ ಬಾಂಬ್ ಪತ್ತೆ ಹಚ್ಚಲಾಗಿದ್ದು, ನಿಷ್ಕ್ರಿಯಗೊಳಿಸಲಾಗಿದೆ. ಈ ಉಗ್ರರು ಕಾಶ್ಮೀರದ ಜೊತೆ ನಿರಂತರ ಸಂಪರ್ಕ ಹೊಂದಿದ್ದರು, ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದರು, ಹಲವು ದಿನಗಳ ಕಾಲ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ಹಾಕಿಕೊಂಡಿರುವ ಬಗ್ಗೆ ತಿಳಿದು ಬಂದಿದೆ. ಯುಪಿಯ ವಿವಿಧೆಡೆ ಹುಡುಕಾಟ ಇನ್ನೂ ಜಾರಿಯಲ್ಲಿದೆ,'' ಎಂದು ಯುಪಿ ಎಟಿಎಸ್ ಐಜಿಪಿ ಜಿಕೆ ಗೋಸ್ವಾಮಿ ಅವರು ಇಂಡಿಯಾ ಟುಡೇ ಜೊತೆ ಮಾತನಾಡುತ್ತಾ ಹೇಳಿದರು.