ತಿರುವನಂತಪುರಂ: 1994 ಇಸ್ರೊ ಬೇಹುಗಾರಿಕೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೇರಳದ ಮಾಜಿ ಡಿಜಿಪಿ ಸಿಬಿ ಮ್ಯಾಥ್ಯೂಸ್ ಅರ್ಜಿಯನ್ನು ಇತ್ಯರ್ಥಗೊಳಿಸುವ ಮುನ್ನ ಪ್ರಕರಣದಲ್ಲಿ ಬಂಧಿಸಲಾಗಿದ್ದ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಮತ್ತು ಇಬ್ಬರು ಮಾಲ್ಡೀವ್ಸ್ ಪ್ರಜೆಗಳ ಅಹವಾಲು ಆಲಿಸಲಾಗುತ್ತದೆ ಎಂದು ನ್ಯಾಯಾಲಯ ಸೋಮವಾರ ತಿಳಿಸಿದೆ.
ಬೇಹುಗಾರಿಕೆ ಪ್ರಕರಣದಲ್ಲಿ ನಂಬಿ ನಾರಾಯಣನ್ ಅವರ ಬಂಧನಕ್ಕೆ ಸಂಬಂಧಿಸಿ, ಮ್ಯಾಥ್ಯೂ ಹಾಗೂ ಇತರ 17 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನಿಗಾಗಿ ಮ್ಯಾಥ್ಯೂ ಅರ್ಜಿ ಸಲ್ಲಿಸಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶ ಪಿ. ಕೃಷ್ಣಕುಮಾರ್, 'ಮೊದಲು ಸಂತ್ರಸ್ತರ ಅಹವಾಲಿಗೆ ಅವಕಾಶ ನೀಡಲಾಗುವುದು' ಎಂದು ಹೇಳಿದರು.
ನ್ಯಾಯಾಧೀಶರ ಈ ನಿರ್ದೇಶನದೊಂದಿಗೆ ಈ ಪ್ರಕರಣವನ್ನು ಜುಲೈ 14ರಂದು ಕೈಗೆತ್ತಿಕೊಳ್ಳುವ ವಿಷಯಗಳ ಪಟ್ಟಿಗೆ ಸೇರಿಸಲಾಯಿತು.