ನವದೆಹಲಿ: ಮಿಜೋರಾಮ್- ಅಸ್ಸಾಂ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. 8 ಮಂದಿ ರೈತರ ಗುಡಿಸಲಿಗೆ ಬೆಂಕಿ ಹಚ್ಚಿದ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದ್ದು, ಅಜ್ಞಾತ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಗೃಹ ಸಚಿವ ಅಮಿತ್ ಶಾ ಅವರು ಸಭೆ ನಡೆಸಿದ್ದು ಗಡಿ ವಿಚಾರ ಚರ್ಚೆಯಾದ ಬಳಿಕ ಈ ಘಟನೆ ನಡೆದಿದೆ.
ಮಿಜೊರಾಮ್ ನ ಡಿಐಜಿ (ನಾರ್ತನ್ ರೇಂಜ್) ಲಾಲ್ಬಿಯಕ್ತಂಗ ಖಿಯಾಂಗ್ಟೆ ಈ ಘಟನೆ ಬಗ್ಗೆ ಮಾತನಾಡಿದ್ದು ಐಟ್ಲಾಂಗ್ ಸ್ಟ್ರೀಮ್ ನಲ್ಲಿ ಕನಿಷ್ಟ 8 ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿದೆ. ಅಸ್ಸಾಂ ಗಡಿಗೆ ಹತ್ತಿರವಿರುವ ಭಾಗದ ಗ್ರಾಮವಾದ ವಾರಿಂಗ್ಟೇಗೆ ಸೇರಿದ್ದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗ್ರಾಮದಲ್ಲಿರುವ ಸಂತ್ರಸ್ತರು, ಗುಡಿಸಲುಗಳ ಮಾಲಿಕರು ಪೊಲೀಸರಿಗೆ ದೂರು ನೀಡಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಲಾಲ್ಬಿಯಕ್ತಂಗ ಖಿಯಾಂಗ್ಟೆ ತಿಳಿಸಿದ್ದಾರೆ. ಜೂನ್ ತಿಂಗಳಾಂತ್ಯದಲ್ಲಿ ಅಸ್ಸಾಂ ಪೊಲೀಸರು ವಾರಿಂಗ್ಟೇಯಿಂದ 5 ಕಿ.ಮೀ ದೂರವಿರುವ ಐಟ್ಲಾಂಗ್ ನಾರ್ ಎಂಬ ಪ್ರದೇಶವನ್ನು ನೆರೆ ರಾಜ್ಯ ಆತಿಕ್ರಮಿಸಿದೆ ಎಂಬ ಆರೋಪವಿದ್ದರಿಂದ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರ ಪರಿಣಾಮ ಘರ್ಷಣೆ ಸಂಭವಿಸಿದೆ. ತೆರವು ಕಾರ್ಯಾಚರಣೆಯಲ್ಲಿ ಮಿಜೊರಾಮ್ ಗೆ ಸೇರಿದ ಹಲವು ಬೆಳೆಗಳು ಹಾನಿಗೀಡಾಗಿದೆ ಎಂದೂ ಅಸ್ಸಾಂ ಪೊಲೀಸರು ಮಾಹಿತಿ ನೀಡಿದ್ದಾರೆ.