ಪತ್ತನಂತಿಟ್ಟು: ಶಬರಿಮಲೆ ಸನ್ನಿಧಿಯ ಆದಾಯವು ಹತ್ತನೇ ಒಂದು ಭಾಗದಷ್ಟು ಕುಸಿದಿರುವುದರಿಂದ ಹೆಚ್ಚಿನ ಯಾತ್ರಾರ್ಥಿಗಳಿಗೆ ಶಬರಿಮಲೆಗೆ ಭೇಟಿ ನೀಡಲು ಅವಕಾಶ ನೀಡಬೇಕೆಂದು ತಿರುವಾಂಕೂರು ದೇವಸ್ವಂ ಮಂಡಳಿ ಒತ್ತಾಯಿಸಿದೆ. ಮುಂಬರುವ ತಿಂಗಳ ಪೂಜೆ(ಮಾಸ ಪೂಜಾ)ಗೆ ದಿನಕ್ಕೆ ಕನಿಷ್ಠ 10,000 ಯಾತ್ರಾರ್ಥಿಗಳನ್ನು ಪ್ರವೇಶಿಸುವಂತೆ ಮಂಡಳಿ ಸರ್ಕಾರವನ್ನು ಕೇಳಿದೆ. ದೇವಸ್ವಂ ಮಂಡಳಿಯ ಆರ್ಥಿಕ ಬಿಕ್ಕಟ್ಟು ಬಿಗುಡಾಯಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ದೇವಸ್ವಂ ಮಂಡಳಿಯ ವ್ಯಾಪ್ತಿಯ ನೌಕರರಿಗೆ ತಿಂಗಳಿಗೆ ಸುಮಾರು 40 ಕೋಟಿ ರೂ.ಸಂಬಳ ರೂಪದಲ್ಲಿ ಬೇಕಾಗುತ್ತದೆ. ತುರ್ತು ಸಹಾಯವಾಗಿ 100 ಕೋಟಿ ರೂ. ಕೋರಿ ಕಳೆದ ತಿಂಗಳು ಸರ್ಕಾರಕ್ಕೆ ಪತ್ರ ಕಳುಹಿಸಲಾಗಿದ್ದರೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ಪ್ರಸ್ತುತ ಬಿಕ್ಕಟ್ಟು ಮುಂದುವರಿದರೆ ಮುಂದಿನ ತಿಂಗಳು ಸಂಬಳ ಮತ್ತು ಪಿಂಚಣಿಗಳನ್ನು ಕಡಿತಗೊಳಿಸಬೇಕಾಗಬಹುದು ಎಂದು ಮಂಡಳಿಯು ಕಳವಳ ವ್ಯಕ್ತಪಡಿಸಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯಡಿ 1,250 ದೇವಾಲಯಗಳಿದ್ದರೂ, ಮುಖ್ಯ ಆದಾಯದ ಮೂಲವೆಂದರೆ ಶಬರಿಮಲೆ ಸನ್ನಿಧಿ. 2019 ರಲ್ಲಿ 270 ಕೋಟಿ ರೂ. ಗಳಿಸಿದ್ದ ಶಬರಿಮಲೆಯಲ್ಲಿ ಕಳೆದ ಋತುವಿನಲ್ಲಿ ಕೇವಲ 21 ಕೋಟಿ ರೂ. ಮಾತ್ರ ಆದಾಯ ಬಂದಿದೆ. ಕೊರೋನಾ ಮತ್ತು ಲಾಕ್‍ಡೌನ್‍ನ ಎರಡನೇ ತರಂಗದಿಂದಾಗಿ, ಕಳೆದ ಎರಡು ತಿಂಗಳಿನಿಂದ ಭಕ್ತರಿಗೆ ಪ್ರವೇಶವನ್ನು ಅನುಮತಿಸಲಾಗಿಲ್ಲ.
ಆದಾಯ ಕೊರತೆ ಗಮನದಲ್ಲಿಟ್ಟುಕೊಂಡು ಭಕ್ತರಿಗೆ ಕರ್ಕಟಕ ತಿಂಗಳ ಪೂಜೆಗೆ ಭಾಗವಹಿಸಲು ಅವಕಾಶ ನೀಡಬೇಕೆಂದು ತಿರುವಾಂಕೂರು ದೇವಸ್ವಂ ಮಂಡಳಿ ಒತ್ತಾಯಿಸಿದೆ. ಲಸಿಕೆ ಹೊಂದಿರುವವರು ಮತ್ತು ಕೊರೋನಾ ನಕಾರಾತ್ಮಕ ಪ್ರಮಾಣಪತ್ರ ಹೊಂದಿರುವವರಿಗೆ ಕೊರೋನಾ ಮಾನದಂಡಗಳಿಗೆ ಅನುಗುಣವಾಗಿ ಪ್ರವೇಶವನ್ನು ಅನುಮತಿಸಬೇಕು. ವರ್ಚುವಲ್ ಕ್ಯೂಗಳ ಮೂಲಕ ಪ್ರತಿದಿನ ಕನಿಷ್ಠ 10,000 ಜನರಿಗೆ ಸನ್ನಿಧಿಗೆ ಅವಕಾಶ ನೀಡಬೇಕೆಂದು ಮಂಡಳಿ ಒತ್ತಾಯಿಸಿದೆ.