ಶಿವಮೊಗ್ಗ: ತೀರ್ಥಹಳ್ಳಿ ತಾಲ್ಲೂಕು ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನೀಡುವ 2020ನೇ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಒರಿಯಾ ಕವಿ ಡಾ.ರಾಜೇಂದ್ರ ಕಿಶೋರ್ ಪಂಡಾ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ 5 ಲಕ್ಷ ನಗದು, ಬೆಳ್ಳಿ ಪದಕ ಒಳಗೊಂಡಿದೆ. ಕೋವಿಡ್ ಪರಿಸ್ಥಿತಿ ನೋಡಿಕೊಂಡು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗುವುದು ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಅಧ್ಯಕ್ಷ ಪ್ರೊ.ಹಂ.ಪ.ನಾಗರಾಜಯ್ಯ ಮಾಹಿತಿ ನೀಡಿದ್ದಾರೆ.
ಒಡಿಶಾದ ಸಂಬಲ್ಪುರ್ ಜಿಲ್ಲೆಯ ಬಟಲಗಾ ಹಳ್ಳಿಯಲ್ಲಿ 1944ರಲ್ಲಿ ಜನಿಸಿದ್ದ ಅವರು 1956-57ರಲ್ಲಿ ಹಿರಾಕುಡ್ ಜಲಾಶಯಕ್ಕಾಗಿ ನೆಲೆ ಕಳೆದುಕೊಂಡಿದ್ದ 285 ಹಳ್ಳಿಗಳ 22 ಸಾವಿರ ಕುಟುಂಬಗಳಲ್ಲಿ ಪಂಡಾ ಅವರ ಕುಟುಂಬವು ಒಂದು. ನಿವೃತ್ತ ಐಎಎಸ್ ಅಧಿಕಾರಿ ಪಂಡಾ ಅವರು ಸಾಹಿತ್ಯ ಕ್ಷೇತ್ರದಲ್ಲೂ ಸಾಕಷ್ಟು ಕೃಷಿ ಮಾಡಿದ್ದಾರೆ. 16 ಕವನ ಸಂಕಲನ, ಒಂದು ಕಾದಂಬರಿ ಪ್ರಕಟಿಸಿದ್ದಾರೆ. 1985ರಲ್ಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2010ರಲ್ಲಿ ಗಂಗಾಧರ್ ರಾಷ್ಟೀಯ ಪ್ರಶಸ್ತಿ ಪುರಸ್ಕೃತರಾಗಿದ್ದರು.