ಹೈದರಾಬಾದ್: ಎಐಎಂಐಎಂ ಪಕ್ಷದ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಕೆಲವು ಗಂಟೆಗಳ ನಂತರ ಅದನ್ನು ಪುನಃ ಸರಿಪಡಿಸಲಾಗಿದೆ. ಟ್ವಿಟರ್ ಖಾತೆಯಲ್ಲಿನ ಪಕ್ಷದ ಹೆಸರನ್ನು ಎಲಾನ್ ಮಸ್ಕ್ ಎಂದು ಬದಲಾವಣೆ ಮಾಡಿ, ಟೆಸ್ಲಾ ಸಿಇಒ ಅವರ ಫೋಟೋವನ್ನು ಹಾಕಲಾಗಿತ್ತು.
ಪಕ್ಷ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಕೆಲವೇ ದಿನಗಳಲ್ಲಿ ಎರಡನೇ ಬಾರಿಗೆ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಹೇಳಿದೆ.
"9 ದಿನಗಳ ಹಿಂದೆ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು. ಈ ಬೆನ್ನಲ್ಲೇ ಟ್ವಿಟರ್ ಗೆ ಮಾಹಿತಿ ನೀಡಿ ಸರಿಪಡಿಸಲಾಗಿತ್ತು. ಇದಾದ ಬಳಿಕ ಜು.18 ರಂದು ಮಧ್ಯಾಹ್ನ 1 ಗಂಟೆ ವೇಳೆಗೆ ಮತ್ತೊಮ್ಮೆ ಹ್ಯಾಕ್ ಮಾಡಲಾಗಿದೆ" ಎಂದು ಎಐಎಂಐಎಂ ಮಾಹಿತಿ ನೀಡಿದೆ.
ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು ಹೈದರಾಬಾದ್ ಪೊಲೀಸರಿಗೆ ದೂರು ನೀಡಲಾಗಿದೆ. ಹೊಸ ಟ್ವೀಟ್ ಗಳನ್ನು ಪೋಸ್ಟ್ ಮಾಡಲಾಗಿಲ್ಲ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ. ಎಐಎಂಐಎಂ ಟ್ವಿಟರ್ ಹ್ಯಾಂಡಲ್ 6.78 ಲಕ್ಷ ಅನುಯಾಯಿಗಳನ್ನು ಹೊಂದಿದೆ.