ನವದೆಹಲಿ: ಧರ್ಮ ಪ್ರಚಾರಕ್ಕಾಗಿ ಭಾರತೀಯ ವೈದ್ಯಕೀಯ ಸಂಘದ ವೇದಿಕೆಯನ್ನು ಬಳಕೆ ಮಾಡದಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಐಎಂಎ ಅಧ್ಯಕ್ಷ ಜೆಎ ಜಯಲಾಲ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿ, ಎಚ್ಚರಿಕೆ ನೀಡಿದೆ.
ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದ ಹರುವಾದ ಹೇಳಿಕೆಗಳನ್ನು ನಿರೀಕ್ಷಿಸುವುದಿಲ್ಲ ಎಂದು ಆಶಾ ಮೆನನ್ ಅವರಿದ್ದ ದೆಹಲಿ ಹೈಕೋರ್ಟ್ ನ ಪೀಠ ಜಯಲಾಲ್ ಅವರಿಗೆ ಎಚ್ಚರಿಸಿದೆ. ಜೂನ್ ನಲ್ಲಿ ಐಎಂಎ ಮುಖ್ಯಸ್ಥರು ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಆಯುರ್ವೇದದ ಔಷಧಕ್ಕಿಂತ ಅಲೋಪಥಿಯೇ ಉತ್ತಮ ಎಂಬುದನ್ನು ಸಾಬೀತುಪಡಿಸುವ ಅವಕಾಶವನ್ನು ಹಿಂದೂ ಧರ್ಮವನ್ನು ಹೀಗಳೆದು ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಜಯಲಾಲ್ ವಿರುದ್ಧ ರೋಹಿತ್ ಝಾ ಎಂಬುವವರು ದೂರು ನೀಡಿ ಅರ್ಜಿ ಸಲ್ಲಿಸಿದ್ದರು.
ಜಯಲಾಲ್ ಅವರು ತಮ್ಮ ಹುದ್ದೆಯನ್ನು ದೇಶದ ಜನತೆಯ ದಾರಿ ತಪ್ಪಿಸಲು, ಹಿಂದೂಗಳನ್ನು ಕ್ರೈಸ್ತ ಮತಕ್ಕೆ ಮತಾಂತರ ಮಾಡಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಲಾಗಿತ್ತು.
ಆರೋಪಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವುದಕ್ಕೆ ಜಯಲಾಲ್ ಅವರ ಲೇಖನಗಳು ಹಾಗೂ ಸಂದರ್ಶನಗಳನ್ನು ಉಲ್ಲೇಖಿಸಿದ್ದರು ಹಾಗೂ ಹಿಂದೂ ಧರ್ಮ, ಆಯುರ್ವೇದವನ್ನು ಅವಮಾನಿಸುವ ಯಾವುದೇ ಲೇಖನ ಬರೆಯದಂತೆ ಸಂದರ್ಶನ ನೀಡದಂತೆ ಜಯಲಾಲ್ ಗೆ ನಿರ್ದೇಶನ ನೀಡಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು. ಅಂತೆಯೇ ನ್ಯಾಯಾಲಯ ಭಾರತದ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧ ನಡೆದುಕೊಳ್ಳದಂತೆ ಹಾಗೂ ತಮ್ಮ ಹುದ್ದೆಯ ಜವಾಬ್ದಾರಿ, ಘನತೆಯನ್ನು ಕಾಪಾಡುವಂತೆ ಜಯಲಾಲ್ ಗೆ ಕೋರ್ಟ್ ನಿರ್ದೇಶನ ನೀಡಿತ್ತು. ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯದ ಆದೇಶದ ವಿರುದ್ಧ ಜಯಲಾಲ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.