ನವದೆಹಲಿ: ತಾಷ್ಕೆಂಟ್‌ನಲ್ಲಿ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿಯನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಫ್ಘಾನ್ ನಲ್ಲಿ ಶಾಂತಿ, ಸ್ಥಿರತೆಗೆ ಭಾರತದ ಬೆಂಬಲ ನಿರಂತರವಾಗಿರುತ್ತದೆ ಎಂದು ಹೇಳಿದ್ದಾರೆ.
ಅಫ್ಘಾನ್ ನಿಂದ ಅಮೆರಿಕ ಪಡೆಗಳು ಹಿಂದಕ್ಕೆ ಸರಿದ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿ ಉಗ್ರರು ಅಟ್ಟಹಾಸ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನದ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿರುವುದಾಗಿ ಜೈಶಂಕರ್ ಹೇಳಿದರು.
ಬಹುಪಕ್ಷೀಯ ಸಂಪರ್ಕ ಸಮಾವೇಶದ ಹೊರತಾಗಿ ಸಭೆ ನಡೆಯಿತು. ಅಶ್ರಫ್ ಘನಿಯನ್ನು ಭೇಟಿ ಮಾಡಲು ಸಂತೋಷವಾಯಿತು. ಅಫ್ಘಾನಿಸ್ತಾನ ಮತ್ತು ಸುತ್ತಮುತ್ತಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗಿದೆ. ಅಫ್ಘಾನಿಸ್ತಾನದ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಗೆ ನಮ್ಮ ಬೆಂಬಲವನ್ನು ಪುನರುಚ್ಚರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಟ್ವೀಟ್ ಮಾಡಿದ್ದಾರೆ.
ತಜಿಕಿಸ್ತಾನ ರಾಜಧಾನಿ ದುಶಾನ್ಬೆಗೆ ಎರಡು ದಿನಗಳ ಭೇಟಿಯ ನಂತರ ಜೈಶಂಕರ್ ತಾಷ್ಕೆಂಟ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಜೈಶಂಕರ್ ಶಾಂಘೈ ಸಹಕಾರ ಸಂಘಟನೆಯ(ಎಸ್‌ಸಿಒ) ವಿದೇಶಾಂಗ ಸಚಿವರ ನಿರ್ಣಾಯಕ ಸಭೆಯಲ್ಲಿ ಭಾಗವಹಿಸಿದರು.
ಅಮೆರಿಕಾ ಪಡೆ ಅಫ್ಘಾನ್ ನಿಂದ ಹಿಂದಕ್ಕೆ ಸರಿದ ನಂತರ ಅಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ತಾಲಿಬಾನ್ ತೀವ್ರವಾಗಿ ಯತ್ನಿಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ಎಸ್‌ಸಿಒ ದೇಶಗಳ ವಿದೇಶಾಂಗ ಸಚಿವರು ವ್ಯಾಪಕ ಚರ್ಚೆ ನಡೆಸಿದರು.