ಕೇರಳ ಮೂಲದ ಸುಷ್ಮಾ ಶಂಕರ್ ಅವರಿಗೆ ಕನ್ನಡ ಭಾಷೆಯು ಒಲಿದು ಬಂದ ಪರಿ ಹೇಗಿದೆಯೆಂದರೆ, ಅವರೀಗ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.
ಡಾಕ್ಟರೇಟ್‌ಗಾಗಿ ಸುಷ್ಮಾ ಶಂಕರ್ ಆಯ್ಕೆ ಮಾಡಿಕೊಂಡ ವಿಷಯವೂ ಗಂಭೀರವಾದದ್ದೇ..! "ದ್ರಾವಿಡ ಭಾಷಾ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳು: ಒಂದು ಅಧ್ಯಯನ". (ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಜ್ಞಾನಪೀಠ ಪಡೆದ 19 ಸಾಹಿತಿಗಳ ಪ್ರಶಸ್ತಿ ಪುರಸ್ಕೃತ ಕೃತಿಗಳು)
ಈ ಬಗ್ಗೆ ಸುದೀರ್ಘ ಸಂಶೋಧನೆಯಲ್ಲಿ ತೊಡಗಿದ್ದ ಸುಷ್ಮಾ ಶಂಕರ್ 963 ಪುಟಗಳ ಮಹಾಪ್ರಬಂಧವನ್ನು ದ್ರಾವಿಡ ವಿವಿಗೆ ಸಲ್ಲಿಸಿದ್ದರು. ಈ ಪ್ರಬಂಧಕ್ಕೆ ದ್ರಾವಿಡ ವಿವಿ ಡಾಕ್ಟರೇಟ್ ನೀಡಿದೆ. ಈ ಹಿಂದೆ ಇವರು ಕನ್ನಡದವರೇ ಆದ ಡಾ. ಲಕ್ಷ್ಮೀದೇವಿಯವರ ಮಾರ್ಗದರ್ಶನದಲ್ಲಿ "ಗೋಪಾಲಕೃಷ್ಣ ಅಡಿಗರ ಮತ್ತು ಒ.ಎನ್.ವಿ ಕುರುಪ್ ಅವರ ಬದುಕು- ಬರಹ" ಹಿರಿ ಪ್ರಬಂಧ ರಚಿಸಿ ಎಂ.ಫಿಲ್ ಪದವಿ ಪಡೆದಿದ್ದನ್ನು ಸ್ಮರಿಸಬಹುದು.
ಗುರಿ ಮುಟ್ಟಲು ಗುರು ಬೇಕೆಂಬ ಮಾತಿಗೆ ಅನ್ವರ್ಥವಾಗಿ ಲಕ್ಷ್ಮೀದೇವಿಯವರೊಂದಿಗಿನ ಒಡನಾಟ ಸುಷ್ಮಾರಿಗೆ ಮತ್ತಷ್ಟು ಸಾಧಿಸಲು ಪ್ರೇರಣೆಯಾಗಿದ್ದಿರಬಹುದು. ಬಹಳ ಆತುರವಾಗಿ ಕಾಲನ ಕರೆಗೆ ಓಗೊಟ್ಟು ಎದ್ದು ಹೋದ ಲಕ್ಷ್ಮೀದೇವಿಯವರು, ಇಂದು ಸುಷ್ಮಾರಿಗೆ ಸಂದ ಡಾಕ್ಟರೇಟ್ ಪದವಿಯನ್ನು ಎಲ್ಲರಿಗಿಂತ ತುಸು ಹೆಚ್ಚೇ ಸಂಭ್ರಮಿಸುತ್ತಿದ್ದರೇನೋ..!
ಸುಷ್ಮಾ ಅವರ ಹಿನ್ನೆಲೆ:
ಕೇರಳದ ಕೊಲ್ಲಂ ಜಿಲ್ಲೆ ಕಣ್ಣನ್ನಲ್ಲೂರ್ ನಿವಾಸಿ ತೋಟ್ಟಂಒಟ್ ಜನಪದ ಕಲೆಯ ಗುರುಗಳಾದ ಚೆಲ್ಲಪನ್ ನಾಯರ್ ಮತ್ತು ಸುಭಾಷಿಣಿಯಮ್ಮ ದಂಪತಿಗಳ ಮಗಳಾಗಿ 1971ರ ಮೇ 1ರಂದು ಜನಿಸಿದರು. ಇವರು ಮದುವೆಯಾದದ್ದು ಮಂಡ್ಯ ಮೂಲದ ಮೆಕ್ಯಾನಿಕಲ್ ಇಂಜಿಯರ್ ಬಿ. ಶಂಕರ್ ಅವರನ್ನು. ಅಲ್ಲಿಂದಲೇ ಸುಷ್ಮಾರಿಗೆ ಕನ್ನಡ ಕಲಿವ ಆಸೆ ಮೊಳೆತು ಒಂದು ಡಾಕ್ಟರೇಟ್ ಪಡಕೊಳ್ಳುವಷ್ಟು ಕಲಿತಿದ್ದಾರೆ.
ಸುಷ್ಮಾ ಅವರ ಅನುವಾದಿತ ಕೃತಿಗಳು
* ಡಾ. ದೊಡ್ಡರಂಗೇಗೌಡರ "ಯುಗಶಬ್ದ" ಕವನ ಸಂಕಲನ "ಯುಗಶಬ್ದಂ" ಆಗಿ ಮಲಯಾಳಂಗೆ
* ಒ.ಎನ್.ವಿ. ಕುರುಪ್ ಅವರ "ಭೂಮಿಕ್ಕು ಒರು ಚರಮಗೀತಂ" ಕವನ ಸಂಕಲನವನ್ನು "ಭೂಮಿಗೊಂದು ಚರಮಗೀತೆ" ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಕವನ ಸಂಕಲನಗಳು
* ಮೊದ ಮೊದಲ ಗೆರೆಗಳು, ಅನ್ನ ಕೊಟ್ಟ ಕನ್ನಡ ಮಣ್ಣು- ಕನ್ನಡ