ಚಂಢೀಘಡ: ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಇಬ್ಬರು ಸೇನಾ ಯೋಧರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಗೆ ನಿಯೋಜನೆಗೊಂಡಿದ್ದ 19 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದ್ದ ಸಿಪಾಯಿ ಹರ್ಪ್ರೀತ್ ಸಿಂಗ್ (23) ಮತ್ತು ಕಾರ್ಗಿಲ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ಸಿಪಾಯಿ ಗುರ್ಬೆಜ್ ಸಿಂಗ್ ಎಂದು ಗುರುತಿಸಲಾಗಿದೆ.
ಆರೋಪಿಗಳು ಫೆಬ್ರವರಿ ಮತ್ತು ಮೇ 2021 ರ ನಡುವಿನ ನಾಲ್ಕು ತಿಂಗಳುಗಳಲ್ಲಿ ದೇಶದ ರಕ್ಷಣೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ 900 ಕ್ಕೂ ಹೆಚ್ಚು ವರ್ಗೀಕೃತ ದಾಖಲೆಗಳ ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆದಾರ ರಣವೀರ್ ಸಿಂಗ್ ಅವರೊಂದಿಗೆ ಈಗಾಗಲೇ ಹಂಚಿಕೊಂಡಿದ್ದಾರೆ. ಅವುಗಳನ್ನು ಆತ ಪಾಕಿಸ್ತಾನದ ಇಂಟೆಲೆನ್ಸಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾನೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ದಿಂಕರ್ ಗುಪ್ತಾ ಹೇಳಿದ್ದಾರೆ.
ಮೇ 24 ರಂದು 70 ಗ್ರಾಂ ಹೆರಾಯಿನ್ ನೊಂದಿಗೆ ಬಂಧಿಸಲಾಗಿದ್ದ ರಣವೀರ್ ಸಿಂಗ್ ನಿಂದ ಭಾರತದ ಸೇನೆ ನಿಯೋಜನೆ ಮತ್ತು ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರಹಸ್ಯ ದಾಖಲಾತಿಗಳನ್ನು ಹಿರಿಯ ಎಸ್ಪಿ ನವೀನ್ ಸಿಂಗ್ ನೇತೃತ್ವದ ಜಲಾಂಧರ್ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿರುವುದಾಗಿ ಗುಪ್ತಾ ತಿಳಿಸಿದ್ದಾರೆ.
ವಿಚಾರಣೆ ವೇಳೆಯಲ್ಲಿ ಹರ್ಪೀತ್ ಸಿಂಗ್ ನಿಂದ ದಾಖಲಾತಿ ಪಡೆದಿದ್ದಾಗಿ ರಣವೀರ್ ಸಿಂಗ್ ಬಾಯ್ಬಿಟ್ಟಿದ್ದಾನೆ. ಅವರಿಬ್ಬರೂ ಒಂದೇ ಹಳ್ಳಿಯವರಾಗಿದ್ದು, ಸೇನೆಗೆ ಸಂಬಂಧಿಸಿದ ವರ್ಗೀಕೃತ ದಾಖಲಾತಿಗಳನ್ನು ಹಂಚಿಕೊಂಡರೆ ಹಣಕಾಸಿನ ನೆರವು ನೀಡುವುದಾಗಿ ಹರ್ಪೀತ್ ಸಿಂಗ್ ಗೆ ರಣವೀರ್ ಆಮಿಷ ತೋರಿಸಿ ತದನಂತರ ಗೂಢಚರ್ಯೆಯಂತಹ ಚಟುವಟಿಕೆಗಳಿಗೆ ಆತನ ಸ್ನೇಹಿತ ಗುರ್ಬೆಜ್ ಸಿಂಗ್ ನಿಯೋಜಿಸಿದ್ದ ಎಂದು ಗುಪ್ತಾ ಆರೋಪಿಸಿದ್ದಾರೆ.
ಗುರ್ಬೇಜ್ ಸಿಂಗ್ ಕಾರ್ಗಿಲ್‌ನ 121 ಕಾಲಾಳುಪಡೆ ಬ್ರಿಗೇಡ್ ಪ್ರಧಾನ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರಿಂದ ಭಾರತೀಯ ಸೈನ್ಯಕ್ಕೆ ಸಂಬಂಧಿಸಿದ ಕಾರ್ಯತಂತ್ರ ಮತ್ತು ಯುದ್ಧತಂತ್ರದ ಮಾಹಿತಿಯನ್ನು ಒಳಗೊಂಡಿರುವ ಈ ವರ್ಗೀಕೃತ ದಾಖಲೆಗಳು ಅವರಿಗೆ ಸುಲಭವಾಗಿ ಸಿಗುತಿತ್ತು ಡಿಜಿಪಿ ಅಧಿಕೃತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಸೇನಾ ಅಧಿಕಾರಿಗಳು ಆರೋಪಿಗಳನ್ನು ಜಲಂಧರ್ ಗ್ರಾಮೀಣ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮತ್ತಿತರ ಆರೋಪಿಗಳ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಎಸ್‌ಪಿ ಸಿಂಗ್ಲಾ ತಿಳಿಸಿದ್ದಾರೆ.