ನವದೆಹಲಿ: ಆದಾಯ ತೆರಿಗೆ ಇಲಾಖೆಗೆ ಹೊಸದಾಗಿ ಪ್ರಾರಂಭಿಸಲಾದ ವೆಬ್‌ಸೈಟ್ ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿರುವುದರಿಂದ, ಅಧಿಕಾರಿಗಳು ತಡವಾಗಿ ತೆರಿಗೆ ಪಾವತಿಗೆ ದಂಡವನ್ನು ಮನ್ನಾ ಮಾಡುವ ಬಗ್ಗೆ ಯೋಚಿಸುತ್ತಿದ್ದು, ಇದೇ ಕಾರಣಕ್ಕೆ ಪೋರ್ಟಲ್ ನಲ್ಲಿನ ತಂತ್ರಿಕ ಸಮಸ್ಯೆಯನ್ನು ಪರಿಹರಿಸಲು ಇನ್ಫೋಸಿಸ್ ಮೇಲೆ ಒತ್ತಡ ಹೇರಿದ್ದಾರೆ.
ಕಳೆದ ತಿಂಗಳು ನಡೆದ ಸಭೆಯಲ್ಲಿ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲು ಇನ್ಫೋಸಿಸ್ ಜುಲೈ 15 ರವರೆಗೆ ಸಮಯಾಕಾಶ ಕೋರಿತ್ತು ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳಿಕೊಂಡಿವೆ. ಆದರೆ ಇನ್ಫೋಸಿಸ್ ನಿಗಧಿತ ಕಾಲಾವಧಿಯೊಳಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಕೆಲವು ವಿಭಾಗಗಳಲ್ಲಿ ತಡವಾಗಿ ಕಾಗದ ರಹಿತ ತೆರಿಗೆ ಪಾವತಿ ಮಾಡುವವರಿಗೆ ದಂಡವನ್ನು ಮನ್ನಾ ಮಾಡಬೇಕಾಗುತ್ತದೆ ಮತ್ತು ಮತ್ತೊಂದು ಅವಕಾಶ ನೀಡಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಸಿಬಿಡಿಟಿ ಅಧಿಕಾರಿಯೊಬ್ಬರು, 'ನಾವು ತಾಂತ್ರಿಕ ತಂಡದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಆದರೆ ಕೆಲವು ಸಮಸ್ಯೆಗಳನ್ನು ಪರಿಹರಿಸಲಾಗಿಲ್ಲ. ದೋಷ ಸರಿಪಡಿಸುವಿಕೆಗೆ ನೀಡಲಾಗಿದ್ದ ಗಡುವು ಕೂಡ ಮುಗಿದಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಇದು ಪೂರ್ಣಗೊಳ್ಳದಿದ್ದರೆ, ತಡವಾಗಿ ತೆರಿಗೆ ಪಾವತಿ ಮಾಡುವವರಿಗೆ ದಂಡ ವಿನಾಯಿತಿ ನೀಡುವುದು ಮತ್ತು ತೆರಿಗೆ ಪಾವತಿಗೆ ದಿನಾಂಕವನ್ನು ವಿಸ್ತರಿಸುವುದರ ಕುರಿತು ನಾವು ಪರಿಗಣಿಸಬೇಕಾಗುತ್ತದೆ ಎಂದು ಹೇಳಿದರು.
ಏತನ್ಮಧ್ಯೆ, ಹೊಸ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಆನ್ಲೈನ್‌ನಲ್ಲಿ ಫಾರ್ಮ್‌ಗಳನ್ನು ಸಲ್ಲಿಸುವಲ್ಲಿ ತೆರಿಗೆದಾರರು ವರದಿ ಮಾಡುವ ತೊಂದರೆಗಳ ಹಿನ್ನೆಲೆಯಲ್ಲಿ ಸಿಬಿಡಿಟಿ 15 ಸಿಎ ಮತ್ತು 15 ಸಿಬಿ ಫಾರ್ಮ್‌ಗಳ ಎಲೆಕ್ಟ್ರಾನಿಕ್ ಫೈಲಿಂಗ್‌ನಲ್ಲಿ ಮತ್ತಷ್ಟು ವಿನಾಯಿತಿ ನೀಡುತ್ತದೆ. ತೆರಿಗೆದಾರರು ಈಗ ಆಗಸ್ಟ್ 15 ರವರೆಗೆ ಫಾರ್ಮ್ 15 ಸಿಎ ಮತ್ತು ಫಾರ್ಮ್ 15 ಸಿಬಿಯನ್ನು ದೈಹಿಕವಾಗಿ ಸಲ್ಲಿಸಬಹುದು.
ಅಂತೆಯೇ ಅನಿವಾಸಿ ಭಾರತೀಯರು ಯಾವುದೇ ಪಾವತಿಯನ್ನು ಫಾರ್ಮ್ 15 ಸಿಎಯಲ್ಲಿ ಘೋಷಿಸಬೇಕಾಗಿದೆ. ಆದಾಯ ತೆರಿಗೆ ಫಾರ್ಮ್‌ಗಳು 15 ಸಿಎ / 15 ಸಿಬಿ ಅನ್ನು ಎಲೆಕ್ಟ್ರಾನಿಕ್ ಫೈಲಿಂಗ್‌ನಲ್ಲಿ ತೆರಿಗೆದಾರರು ವರದಿ ಮಾಡುವ ತೊಂದರೆಗಳ ಹಿನ್ನೆಲೆಯಲ್ಲಿ, www.incometax.gov.in ತೆರಿಗೆದಾರರು ಮೇಲಿನ ಫಾರ್ಮ್‌ಗಳನ್ನು ದೈಹಿಕವಾಗಿ ಅಧಿಕೃತ ವಿತರಕರಿಗೆ ಆಗಸ್ಟ್ 15, 2021 ರವರೆಗೆ ಸಲ್ಲಿಸಬಹುದು ಎಂದು ನಿರ್ಧರಿಸಲಾಗಿದೆ. ವಿದೇಶಿ ಹಣ ರವಾನೆಗಾಗಿ ಆಗಸ್ಟ್ 15, 2021 ರವರೆಗೆ ಅಧಿಕೃತ ವಿತರಕರು ಅಂತಹ ಫಾರ್ಮ್‌ಗಳನ್ನು ಸ್ವೀಕರಿಸಲು ಸೂಚಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. .
ಮಂಗಳವಾರ, ಹಣಕಾಸು ಸಚಿವರು ಸಂಸತ್ತಿನಲ್ಲಿ ಇನ್ಫೋಸಿಸ್ ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಅಂಗೀಕರಿಸಿದೆ ಮತ್ತು ಪೋರ್ಟಲ್‌ನ ನಿಧಾನಗತಿಯ ಕಾರ್ಯನಿರ್ವಹಣೆ ಮತ್ತು ಕೆಲವು ಕ್ರಿಯಾತ್ಮಕತೆಗಳ ಲಭ್ಯತೆಯಿಲ್ಲದಂತಹ ಕೆಲವು ಆರಂಭಿಕ ತೊಂದರೆಗಳನ್ನು ತಗ್ಗಿಸಲಾಗಿದೆ ಎಂದು ಹೇಳಿದರು.