ನವದೆಹಲಿ: ಕೇರಳದ ಕೆಲ ಪ್ರದೇಶಗಳಲ್ಲಿ ಕೋವಿಡ್ ದೃಢಪ್ರಮಾಣ ಈಗಲೂ ಹೆಚ್ಚಿದೆ. ಹೀಗಿದ್ದರೂ, ಬಕ್ರೀದ್ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಸಡಿಲಿಸಲು ಅನುಮತಿ ನೀಡಿರುವ ಆ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ನಿರ್ಬಂಧಗಳ ಸಡಿಲಿಕೆಯಿಂದಾಗಿ ಕೊರೊನಾ ಸೋಂಕು ಮತ್ತಷ್ಟು ವ್ಯಾಪಕವಾಗುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಸುಪ್ರೀಂಕೋರ್ಟ್ ಎಚ್ಚರಿಸಿದೆ.
ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಎಫ್.ನರೀಮನ್ ಹಾಗೂ ಬಿ.ಆರ್.ಗವಾಯಿ ಅವರಿರುವ ನ್ಯಾಯಪೀಠ, 'ಕೇರಳ ಸರ್ಕಾರದ ರೀತಿಯಲ್ಲೇ ನಿರ್ಬಂಧಗಳ ಸಡಿಲಿಕೆಗೆ ಅನುಮತಿ ನೀಡುವ ಮೂಲಕ ದೇಶದ ಜನತೆಯನ್ನು ಕೋವಿಡ್ ಸಂಕಷ್ಟಕ್ಕೆ ದೂಡಿದಂತಾಗುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿತು.
'ಸಂವಿಧಾನದ 21ನೇ ವಿಧಿ ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದೆ. ಕೇರಳ ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು' ಎಂದೂ ನ್ಯಾಯಪೀಠ ನಿರ್ದೇಶನ ನೀಡಿತು.