ಮಂಗಳೂರು: ದೇಶದ ಗಡಿಭಾಗದಲ್ಲಿ ಡ್ರೋನ್ ದಾಳಿ ಹೆಚ್ಚಾದ ಹಿನ್ನಲೆಯಲ್ಲಿ ರಾಜ್ಯದ ಮಂಗಳೂರಿನಲ್ಲೂ ಇಸ್ರೇಲ್ ಮಾದರಿಯ ಭದ್ರತೆಗೆ ಚಿಂತನೆ ಮಾಡಲಾಗಿದೆ.
ಜಲ, ವಾಯು, ರಸ್ತೆ ಸಾರಿಗೆ ಹೊಂದಿರುವ ರಾಜ್ಯದ ಏಕೈಕ ಜಿಲ್ಲೆ ಮಂಗಳೂರಿನಲ್ಲಿ ಬಂದರು, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣದಲ್ಲಿ ಇಸ್ರೇಲ್ ಮಾದರಿಯಲ್ಲಿ ಡ್ರೋನ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ತಂತ್ರಜ್ಞಾನವನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಈ ಬಗ್ಗೆ ಮಂಗಳೂರು ಪೊಲೀಸರು ಮತ್ತು ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಮಧ್ಯೆ ಪ್ರಾಥಮಿಕ ಮಾತುಕತೆ ನಡೆದಿದ್ದು, ಸಾಧಕ- ಭಾದಕಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇ ಸಮೀಪವೇ ಡ್ರೋನ್ ಮಾದರಿಯ ಆಟಿಕೆ ಕಂಡು ಬಂದಿತ್ತು. ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟಕ್ಕೆ ನಿಷೇಧವಿದ್ದರೂ ಆಟಿಕೆ ಪತ್ತೆಯಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿತ್ತು. ಆದ್ದರಿಂದ ಹೊಸ ತಂತ್ರಜ್ಞಾನ ರೂಪಿಸಲು ಚಿಂತನೆ ನಡೆಸಲಾಗಿದೆ.
ಇಸ್ರೇಲ್ ತಂತ್ರಜ್ಞಾನದ ಪ್ರಕಾರ, ರಾಡಾರ್, ಕನೆಕ್ಟೆಡ್ ಆಯಂಟಿ ಮಿಸೈಲ್ ಸಿಸ್ಟಮ್ ತನ್ನ ವ್ಯಾಪ್ತಿಯಲ್ಲಿ ಡ್ರೋನ್‌ಗಳು ಪ್ರವೇಶಿಸಿದರೆ ಕ್ಷಣಮಾತ್ರದಲ್ಲಿ ಪತ್ತೆ ಹಚ್ಚಿ ಉಡಾಯಿಸುವ ಸಾಮರ್ಥ್ಯವನ್ನು ಈ ತಂತ್ರಜ್ಞಾನ ಹೊಂದಿದೆ. ಹೀಗಾಗಿ ಮಂಗಳೂರಿನಲ್ಲೂ ಇದೇ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯುವ ಪ್ರಯತ್ನ ನಡೆಯುತ್ತಿದೆ.