ನವದೆಹಲಿ: ಗರ್ಭಿಣಿಯರಿಗೆ ಕೊರೊನಾ ಲಸಿಕೆ ಕುರಿತು ಕೇಂದ್ರ ಸರ್ಕಾರ ಈಚೆಗಷ್ಟೇ ಮಾರ್ಗಸೂಚಿ ಹೊರಡಿಸಿದ್ದು, ಗರ್ಭಿಣಿಯರು ಲಸಿಕೆ ಪಡೆದುಕೊಳ್ಳುವುದು ಅವಶ್ಯಕ ಎಂದು ಹೇಳಿತ್ತು. ಆನಂತರ ಮಗುವಿಗೆ ಹಾಲುಣಿಸುವ ತಾಯಂದಿರು ಲಸಿಕೆ ಪಡೆದುಕೊಳ್ಳುವುದರ ಕುರಿತು ಗೊಂದಲಗಳು ಏರ್ಪಟ್ಟಿದ್ದವು.
ಹಾಲುಣಿಸುವ ತಾಯಂದಿರಿಗೆ ಕೊರೊನಾ ಲಸಿಕೆ ಸುರಕ್ಷಿತವಾಗಿದೆಯೇ ಎಂಬ ಕುರಿತ ಚರ್ಚೆ ಹಾಗೂ ಸಂದೇಹಗಳ ಮಧ್ಯೆ, ಸ್ತನ್ಯಪಾನ ಮಾಡಿಸುವ ತಾಯಂದಿರು ಕೊರೊನಾ ವಿರುದ್ಧ ಲಸಿಕೆ ಪಡೆದುಕೊಂಡರೆ ಆರೋಗ್ಯಕ್ಕೆ ಪೂರಕ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಸಾಂಕ್ರಾಮಿಕ ರೋಗಶಾಸ್ತ್ರ ಹಾಗೂ ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥರಾದ ಡಾ. ಸಮಿರನ್ ಪಾಂಡಾ ಹೇಳಿದ್ದಾರೆ.
"ಹಾಲುಣಿಸುವ ತಾಯಂದಿರು ಕೊರೊನಾ ಲಸಿಕೆಯನ್ನು ಯಾವುದೇ ಹಿಂಜರಿಕೆ ಇಲ್ಲದೇ ಪಡೆದುಕೊಳ್ಳಬೇಕು. ಇದರಿಂದ ಅವರ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾಗುತ್ತದೆ. ಜೊತೆಗೆ ಮಗುವಿಗೆ ಹಾಲುಣಿಸುವುದರಿಂದ ಮಗುವಿನ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ. ಮಗುವಿನ ದೇಹದಲ್ಲಿಯೂ ರೋಗನಿರೋಧಕ ಶಕ್ತಿ ಉತ್ಪತ್ತಿಗೆ ನೆರವಾಗುತ್ತದೆ" ಎಂದು ಹೇಳಿದ್ದಾರೆ.
"ಈಗ ಲಭ್ಯವಿರುವ ಲಸಿಕೆಗಳು ಕೊರೊನಾ ರೂಪಾಂತರಗಳ ವಿರುದ್ಧ ಪರಿಣಾಮಕಾರಿ ಹೌದೋ ಅಲ್ಲವೋ ಎಂಬ ಕುರಿತು ಜನರಲ್ಲಿ ಗೊಂದಲಗಳಿವೆ. ಆದರೆ ಈ ಲಸಿಕೆಗಳು ರೂಪಾಂತರಗಳ ವಿರುದ್ಧವೂ ಪರಿಣಾಮಕಾರಿಯಾಗಿವೆ. ಸದ್ಯಕ್ಕೆ ಭಾರತದಲ್ಲಿರುವ ಎಲ್ಲಾ ಲಸಿಕೆಗಳೂ ರೂಪಾಂತರಗಳ ವಿರುದ್ಧ ಹೋರಾಡಬಲ್ಲವು ಎಂಬುದು ಪ್ರಯೋಗಗಳಿಂದ ಸಾಬೀತಾಗಿವೆ" ಎಂದು ವಿವರಣೆ ನೀಡಿದರು.
''ಕೋವಿಡ್ ವಿರುದ್ದದ ಭಾರತ ಸರ್ಕಾರ ಅನುಮೋದಿಸಿರುವ ನಾಲ್ಕು ಲಸಿಕೆಗಳಾದ ಕೋವಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ ವಿ ಮತ್ತು ಮಾಡರ್ನಾ ಹಾಲುಣಿಸುವ ತಾಯಂದಿರಿಗೆ ಸುರಕ್ಷಿತವಾಗಿದೆ'' ಎಂದು ಈಚೆಗೆ ನೀತಿ ಆಯೋಗದ ಸದಸ್ಯರಾದ ಡಾ.ವಿ.ಕೆ. ಪೌಲ್ ತಿಳಿಸಿದ್ದರು. "ಎಲ್ಲಾ ಲಸಿಕೆಗಳನ್ನು ವೈಜ್ಞಾನಿಕ ಸಂಶೋಧನೆಗಳ ಬಳಿಕ ಬಳಕೆಗೆ ಅನುಮತಿ ನೀಡಲಾಗುತ್ತದೆ ಎಂದು ನಾವು ತಿಳಿದಿರಬೇಕು. ಯಾವುದೇ ಲಸಿಕೆಗಳು ಅಡ್ಡಪರಿಣಾಮವನ್ನು ಹೊಂದಿಲ್ಲ. ಈ ಬಗ್ಗೆ ನಾನು ಭರವಸೆ ನೀಡಬಲ್ಲೆ. ನಮ್ಮನ್ನು, ಕುಟುಂಬ ಮತ್ತು ಸಮಾಜವನ್ನು ಕೊರೊನಾ ವೈರಸ್‌ನಿಂದ ರಕ್ಷಿಸುವುದು ಈ ಸಂದರ್ಭದಲ್ಲಿ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ, ಎಲ್ಲರೂ ಮುಂದೆ ಬಂದು ಲಸಿಕೆ ಪಡೆಯಬೇಕು," ಎಂದು ಪೌಲ್ ಮನವಿ ಮಾಡಿದ್ದರು.
ಕೋವಿಡ್ ಲಸಿಕೆಗಳು ಸುರಕ್ಷಿತವಾಗಿದೆ. ಹಾಲುಣಿಸುವ ಎಲ್ಲ ಮಹಿಳೆಯರಿಗೆ ಶಿಫಾರಸು ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೂಡ ಪ್ರಕಟಣೆಯಲ್ಲಿ ತಿಳಿಸಿತ್ತು.