ಕೊರೋನದ ಎರಡೂ ಅಲೆಗಳ ಹೊಡೆತಕ್ಕೆ ಸಿಕ್ಕಿ ನಮ್ಮ ಸಾಮಾಜಿಕ ಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಮುಖ್ಯವಾಗಿ ನಾಳಿನ ನಾಗರಿಕರೆಂದು ಕರೆಯಲ್ಪಡುವ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆಯೇ ಗಾಢ ಅಂಧಕಾರ ಕವಿದಿದೆ. ಖಾಸಗಿ ಶಾಲಾ ಶುಲ್ಕದ ವಿವಾದ ಹೈಕೋರ್ಟ್ ಮೆಟ್ಟಿಲೇರಿರುವಾಗ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆ (ಕ್ಯಾಮ್ಸ್) ಬಿಡುಗಡೆ ಮಾಡಿದ ಸಮೀಕ್ಷಾ ವರದಿಯ ಪ್ರಕಾರ 250 ಶಾಲೆಗಳ 60 ಸಾವಿರ ವಿದ್ಯಾರ್ಥಿಗಳು ಈ ವರ್ಷ ಶಾಲೆಗೆ ದಾಖಲಾಗಿಲ್ಲ. ಅವರ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಮಾಹಿತಿ ಇಲ್ಲ.
ಸಂವಿಧಾನದ ಪ್ರಕಾರ ಶಿಕ್ಷಣ ಎಂಬುದು ಮೂಲಭೂತ ಹಕ್ಕು. ಈ ಮೂಲಭೂತ ಹಕ್ಕಿನಿಂದ ಒಬ್ಬಿಬ್ಬರಲ್ಲ 60 ಸಾವಿರ ವಿದ್ಯಾರ್ಥಿಗಳು ವಂಚಿತರಾಗಿರುವುದಕ್ಕೆ ಯಾರು ಹೊಣೆ? ಸಮೀಕ್ಷೆ ನಡೆಸಿದ ಶಾಲೆಗಳಲ್ಲಿ ಒಟ್ಟು 1.85 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಪೈಕಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶುಲ್ಕ ಕಟ್ಟಿ 1.25 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹಾಗಿದ್ದರೆ ಶಾಲೆಗೆ ಬರುತ್ತಿದ್ದ ಉಳಿದ 60 ಸಾವಿರ ವಿದ್ಯಾರ್ಥಿಗಳು ಎಲ್ಲಿ ನಾಪತ್ತೆಯಾದರು?. ಮಕ್ಕಳನ್ನು ಶಾಲೆಗೆ ಕರೆತರುವ ಉದ್ದೇಶದಿಂದ ಸಮೀಕ್ಷೆ ನಡೆಸಿದಾಗ ಬಹುತೇಕ ವಿದ್ಯಾರ್ಥಿಗಳ ಕುಟುಂಬಗಳು ಮೊದಲು ನೀಡಿದ ವಿಳಾಸದಲ್ಲಿ ಇರಲಿಲ್ಲ. ಇದಕ್ಕಾಗಿ ಮಕ್ಕಳ ಪೋಷಕರಿಗೆ ದೂರವಾಣಿ ಕರೆ ಮಾಡಿದರೆ ಕರೆ ಹೋಗದಿರುವ ಸಂಗತಿ ಬಯಲಾಗಿದೆ. ಕೆಲ ಪೋಷಕರು ಕರೆ ಸ್ವೀಕರಿಸಿದರೂ ಮಕ್ಕಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಶಾಲೆಗೆ ದಾಖಲು ಮಾಡಲು ಹೇಳಿದರೆ ಅದಕ್ಕೆ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಕೆಲವರು ಬೇರೆ ಶಾಲೆಗೆ ಸೇರಿಸಿದ್ದಾಗಿ ಹೇಳುತ್ತಾರೆ. ಹಾಗಿದ್ದರೆ ವರ್ಗಾವಣೆ ಪತ್ರ ಪಡೆಯದೆ ಬೇರೆ ಶಾಲೆಗಳಿಗೆ ಹೇಗೆ ದಾಖಲಿಸಿದರು? ಎಂಬಂತಹ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಖಾಸಗಿ ಅನುದಾನಿತ ಶಾಲೆಗಳಲ್ಲಿ ದಾಖಲಾತಿ ಕಳೆದ ವರ್ಷವೂ ಆಗಿಲ್ಲ. ಈ ವರ್ಷವೂ ಆಗಿಲ್ಲ. ಹಾಗಿದ್ದರೆ ಮಕ್ಕಳ ಮುಂದಿನ ಭವಿಷ್ಯವೇನು? ರಾಜ್ಯ ಸರಕಾರ ಇದಕ್ಕೆ ಹೊಣೆಯಲ್ಲವೇ? ಮುಖ್ಯಮಂತ್ರಿಯನ್ನು ಬದಲಿಸುವ ದಿಲ್ಲಿ ಯಾತ್ರೆಯ ರಾಜಕೀಯದಲ್ಲಿ ಮುಳುಗಿದವರಿಗೆ ರಾಜ್ಯದ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಕವಿದ ಕತ್ತಲಿನ ಅರಿವಿದೆಯೇ?
ಕೊರೋನ ಪರಿಣಾಮವಾಗಿ ಸಾವಿರಾರು ಕುಟುಂಬಗಳು ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿವೆ. ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿವೆ. ಇಂತಹ ಬಡ ಕುಟುಂಬಗಳ ಮಕ್ಕಳು ಶುಲ್ಕ ಕಟ್ಟಲಾಗದೆ ಶಾಲೆಯಿಂದ ಹೊರಗುಳಿದರೆ? ಸತ್ಯ ಸಂಗತಿ ಬಯಲಿಗೆ ಬರಬೇಕಾಗಿದೆ. ಕೋವಿಡ್ ಕಾರಣದಿಂದ ಶಾಲೆಗಳು ಮುಚ್ಚಿದ ಪರಿಣಾಮವಾಗಿ 2020-21ನೇ ಸಾಲಿನಲ್ಲಿ ಶೇಕಡಾ 70ರಷ್ಟು ಬೋಧನಾ ಶುಲ್ಕವನ್ನು ಮಾತ್ರ ಪಡೆಯಬೇಕೆಂದು ಶಿಕ್ಷಣ ಇಲಾಖೆ ಕಳೆದ ಜನವರಿಯಲ್ಲಿ ಅನುದಾನಿತ ಶಾಲೆಗಳಿಗೆ ಸುತ್ತೋಲೆ ಮೂಲಕ ಆದೇಶ ನೀಡಿತ್ತು. ಶುಲ್ಕ ಕಡಿತಗೊಳಿಸಿರುವ ಶಿಕ್ಷಣ ಇಲಾಖೆಯ ಕ್ರಮವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿವೆ. ಕೋರ್ಟ್ ಅಂತಿಮ ತೀರ್ಪನ್ನು ನೀಡಿಲ್ಲ. ಅಂದರೆ ಸದ್ಯದ ಪರಿಸ್ಥಿತಿಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಶಿಕ್ಷಣ ಇಲಾಖೆ ಸೂಚಿಸಿದಂತೆ ಶೇಕಡಾ 70ರಷ್ಟು ಮಾತ್ರ ಶುಲ್ಕವನ್ನು ತೆಗೆದುಕೊಳ್ಳಬೇಕು. ಆದರೆ ಹೈಕೋರ್ಟ್ ಅಂತಿಮ ತೀರ್ಪು ಕೊಡುವ ಮುನ್ನವೇ ವಿದ್ಯಾರ್ಥಿಗಳು ಪೂರ್ತಿ ಶುಲ್ಕವನ್ನು ಪಾವತಿ ಮಾಡಬೇಕು ಎಂದು ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕುತ್ತಿರುವುದು ಸರಿಯಲ್ಲ.
ಈಗ ವಿದ್ಯೆ ಎಂಬುದು ಹಣ ಗಳಿಸುವ ವ್ಯಾಪಾರವಾಗಿದೆ. ಕಿರಾಣಿ ಅಂಗಡಿ, ಚಹಾದ ಅಂಗಡಿಗಳಂತೆ ಹಣವಿದ್ದವರು ಮಾತ್ರವಲ್ಲ, ಸಣ್ಣಪುಟ್ಟ ವ್ಯಾಪಾರಿಗಳೂ ಯಾವ ಮೂಲಭೂತ ಸೌಕರ್ಯಗಳಿಲ್ಲದ ಶಾಲೆಗಳನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಆರಂಭಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅನೇಕ ಶಾಸಕರು ಮತ್ತು ಮಂತ್ರಿಗಳು ಕೂಡ ತಮ್ಮದೇ ಶಾಲೆ, ಕಾಲೇಜುಗಳನ್ನು ಹೊಂದಿದ್ದಾರೆ. ಇಂತಹವರಿಂದಾಗಿಯೇ ಶೈಕ್ಷಣಿಕ ವ್ಯವಸ್ಥೆ ಹದಗೆಟ್ಟು ಅದರ ಗುಣಮಟ್ಟ ಕುಸಿಯುತ್ತಿದೆ.
ನಿಜ, ಕೊರೋನ ನಂತರದ ದಿನಗಳಲ್ಲಿ ಎಲ್ಲರೂ ತೊಂದರೆಯಲ್ಲಿ ಇದ್ದಾರೆ. ಹಾಗೆಂದು ಶುಲ್ಕ ವಸೂಲಿ ಮಾಡಲು ಸಲ್ಲದ ಒತ್ತಡದ ತಂತ್ರ ಅನುಸರಿಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಆನ್‌ಲೈನ್ ತರಗತಿಗಳನ್ನು ನಿಲ್ಲಿಸುವುದು, ವರ್ಗಾವಣೆ ಪ್ರಮಾಣ ಪತ್ರ ನೀಡದಿರುವುದು, ಪರೀಕ್ಷೆಯಲ್ಲಿ ಹಾಲ್ ಟಿಕೆಟ್ ಕೊಡದಿರುವುದು ಇವೆಲ್ಲ ಅಮಾನವೀಯ ಕ್ರಮಗಳಲ್ಲದೆ ಬೇರೇನೂ ಅಲ್ಲ.
ಅನುದಾನಿತ ಶಾಲೆಗಳಿಗೆ ತೊಂದರೆ ಇಲ್ಲವೆಂದಲ್ಲ. ಶುಲ್ಕ ವಸೂಲಿಗಾಗಿ ಬಲವಂತದ ತಂತ್ರವನ್ನು ಅನುಸರಿಸುವ ಬದಲಿಗೆ ಪೋಷಕರಿಗೆ ಕಾಲಾವಕಾಶ ನೀಡಲಿ. ''ಶುಲ್ಕ ಪಾವತಿಸದ ಕಾರಣಕ್ಕಾಗಿ ಕೆಲ ಶಾಲೆಗಳಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡದಿರುವುದು ಗಮನಕ್ಕೆ ಬಂದಿದೆ'' ಎಂದು ಶಿಕ್ಷಣ ಸಚಿವರೇ ಹೇಳಿದ್ದಾರೆ. ನ್ಯಾಯಾಲಯದ ಮುಂದೆ ಇರುವ ಶಾಲಾ ಶುಲ್ಕದ ವಿಷಯದ ಬಗ್ಗೆ ಒತ್ತಡ ತಂತ್ರವನ್ನು ಅನುಸರಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು.
ಶಾಲಾ ಶುಲ್ಕದ ವಿಷಯದಲ್ಲಿ ಸುಪ್ರೀಂ ಕೋರ್ಟ್ ಈಗಾಗಲೇ ನ್ಯಾಯಸಮ್ಮತ ತೀರ್ಪನ್ನು ನೀಡಿದೆ. ಅದೇ ರೀತಿ ಹೈಕೋರ್ಟ್ ಕೂಡ ಸಾಮಾಜಿಕ ನ್ಯಾಯದ ತತ್ವವನ್ನು ಆಧರಿಸಿ ಜುಲೈ 22ರಂದು ತೀರ್ಪು ನೀಡುವ ನಿರೀಕ್ಷೆ ಇದೆ.
ರಾಜ್ಯ ಅನುದಾನರಹಿತ ಖಾಸಗಿ ಶಾಲೆಗಳ ಶಿಕ್ಷಣ ಸಂಸ್ಥೆಗಳ ಸಂಘಟನೆ ಬಹಿರಂಗ ಪಡಿಸಿದ ಅಂಕಿ-ಅಂಶಗಳ ಪ್ರಕಾರ 60 ಸಾವಿರ ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದಿರುವುದು ನಿಜವಾದಲ್ಲಿ ಅವರು ಆರ್ಥಿಕ ತೊಂದರೆಯಿಂದ ವಿದ್ಯೆಗೆ ಎಳ್ಳು ನೀರು ಬಿಟ್ಟಂತೆ ಕಾಣುತ್ತದೆ. ಇದು ನಿಜವಾಗಿದ್ದರೆ ಉಳ್ಳವರ ಮಕ್ಕಳಿಗೆ ಮಾತ್ರ ಶಿಕ್ಷಣ, ಇಲ್ಲದವರ ಮಕ್ಕಳಿಗೆ ಇಲ್ಲ ಎಂಬುದು ಸ್ಪಷ್ಟವಾದಂತಾಗಿದೆ. ಇದು ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸಿದ ಸಮೀಕ್ಷೆಯಾಗಿದೆ. ಹಾಗಾಗಿ ಇದು ನಿಖರವಾದ ಅಂಕಿ-ಅಂಶ ಅಲ್ಲ. ಶಿಕ್ಷಣ ಇಲಾಖೆ ಸಮೀಕ್ಷೆ ನಡೆಸಿದರೆ ಶಾಲೆ ತೊರೆದು ಕೂಲಿಗೆ ಹೊರಟ ವಿದ್ಯಾರ್ಥಿಗಳ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಂಭವವಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ಸಮೀಕ್ಷೆ ನಡೆಸಿ ನಿಖರವಾದ ಅಂಕಿ-ಅಂಶಗಳನ್ನು ಪ್ರಕಟಿಸಲಿ. ಬಡತನದ ಕಾರಣಕ್ಕಾಗಿ ಶಾಲೆ ತೊರೆದ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ, ಈ ಮಕ್ಕಳ ಬದುಕಿಗೆ ಬೆಳಕನ್ನು ನೀಡಲಿ.
ಈ ದೇಶದಲ್ಲಿ ಶತಮಾನಗಳಿಂದ ವಿದ್ಯೆ ಎಂಬುದು ಕೆಲವೇ ಕೆಲವರ ಸೊತ್ತಾಗಿದೆ. ಲಕ್ಷಾಂತರ ಜನ ಅಕ್ಷರದ ಬೆಳಕನ್ನು ಕಂಡಿದ್ದು ದೇಶಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನ ಜಾರಿಯಾದ ನಂತರ ಈ ಸಂವಿಧಾನದ ಆಶಯಕ್ಕೆ ಅಪಚಾರ ಆಗದಂತೆ ಸರಕಾರ ನಿಗಾ ವಹಿಸಬೇಕು.