ನವದೆಹಲಿ: ಡೆಲ್ಟಾ ಕೊರೊನಾ ರೂಪಾಂತರಕ್ಕಿಂತ ಅಪಾಯಕಾರಿ ಎನ್ನಲಾದ ಲ್ಯಾಂಬ್ಡಾ ರೂಪಾಂತರ ಪ್ರಕರಣ ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಮೂಲಗಳು ತಿಳಿಸಿವೆ.
ಇದುವರೆಗೂ ಈ ಲ್ಯಾಂಬ್ಡಾ ರೂಪಾಂತರ ಮೂವತ್ತು ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಈ ರೂಪಾಂತರದ ಮೂಲ ಪೆರು ಆಗಿದ್ದು, ಅಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಈ ರೂಪಾಂತರವೇ ಕಾರಣ ಎನ್ನಲಾಗಿದೆ. ಮೇ ಹಾಗೂ ಜೂನ್‌ನಲ್ಲಿ ಪೆರು ಹಾಗೂ ಚಿಲಿಯಲ್ಲಿ ಅತಿ ಹೆಚ್ಚಿನ ಲ್ಯಾಂಬ್ಡಾ ಪ್ರಕರಣಗಳು ಕಂಡುಬಂದಿವೆ.
ಬ್ರಿಟನ್‌ನಲ್ಲಿ ಇದುವರೆಗೂ ಆರು ಲ್ಯಾಂಬ್ಡಾ ಪ್ರಕರಣಗಳು ಪತ್ತೆಯಾಗಿವೆ. ಡೆಲ್ಟಾ ಮಾದರಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಲ್ಯಾಂಬ್ಡಾ ಸೋಂಕು ಹರಡಬಹುದು. ಇದರಲ್ಲಿ ಪ್ರತಿಕಾಯಗಳನ್ನು ತಟಸ್ಥಗೊಳಿಸುವ ಶಕ್ತಿಯೂ ಇದ್ದು, ಬೇರೆ ಮಾದರಿಗಳಿಗಿಂತ ವೇಗವಾಗಿ ಹರಡುವುದರಿಂದ ಅಪಾಯದ ಸಾಧ್ಯತೆಗಳು ಹೆಚ್ಚಿವೆ ಎಂದು ಎಚ್ಚರಿಕೆ ನೀಡಲಾಗಿದೆ.
ಲ್ಯಾಂಬ್ಡಾ ತಳಿ ವೇಗವಾಗಿ ಹರಡುತ್ತದೆ ಎನ್ನುವುದಕ್ಕೆ ಯಾವುದೇ ಅಧಿಕೃತ ಪುರಾವೆಗಳಿಲ್ಲ ಎಂದು ಕೆಲವು ತಜ್ಞರು ಹೇಳಿದ್ದಾರೆ. ಇದೀಗ ಯುರೋಪ್ ಭಾಗದ ದೇಶಗಳು ಡೆಲ್ಟಾ ತಳಿಯ ವಿರುದ್ಧ ಹೋರಾಡುತ್ತಿರುವ ಸಮಯದಲ್ಲೇ ಲ್ಯಾಂಬ್ಡಾ ಪತ್ತೆಯಾಗಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.