ನವದೆಹಲಿ: ಭಾರತದಲ್ಲಿ ದೈನಂದಿನ ಕೋವಿಡ್ -19 ಲಸಿಕೆ ನೀಡಿಕೆ ಸಂಖ್ಯೆಯು ಜೂನ್ 21 ರ ಗರಿಷ್ಠ ಮಟ್ಟದಿಂದ ಶೇಕಡ 50 ಕ್ಕಿಂತಲೂ ಕಡಿಮೆಯಾಗಿದೆ. ಜೂನ್ 21 ರಂದು ಒಂದು ದಿನದಲ್ಲಿ 8.7 ಮಿಲಿಯನ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ದೈನಂದಿನ ಲಸಿಕೆ ದರವು ಸೋಮವಾರ ಕೇವಲ 4 ಮಿಲಿಯನ್ ಡೋಸ್‌ಗಳಿಗೆ ಇಳಿದಿದೆ.
ಕಳೆದ ಏಳು ದಿನಗಳಿಂದ ಲಸಿಕೆ ನೀಡಿಕೆ ಪ್ರಮಾಣವು ಶೇ. 32 ರಷ್ಟು ಇಳಿಕೆ ಕಂಡಿದೆ. ಹಾಗೆಯೇ ಈ ತಿಂಗಳಿನಲ್ಲಿ ಲಸಿಕೆ ಹೆಚ್ಚಳದ ನಿರೀಕ್ಷೆಯು ಕಡಿಮೆ ಇದೆ ಎಂದು ವರದಿಯಾಗಿದೆ.
ಬ್ಯುಸಿನೆಸ್ ಸ್ಟ್ಯಾಂಡರ್ಡ್ ವಿಶ್ಲೇಷಣೆಯ ಪ್ರಕಾರ, ''ಜೂನ್ 21 ರ ದಾಖಲೆಯ 8.7 ಮಿಲಿಯನ್ ವ್ಯಾಕ್ಸಿನೇಷನ್‌ಗಳಲ್ಲಿ 40 ಪ್ರತಿಶತದಷ್ಟು ಪಾಲನ್ನು ಹೊಂದಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕದಂತಹ ಕೆಲವು ಜನಸಂಖ್ಯೆಯ ರಾಜ್ಯಗಳು ಮುಂದಿನ ದಿನಗಳಲ್ಲಿ ದೈನಂದಿನ ವ್ಯಾಕ್ಸಿನ್‌ಗಳಲ್ಲಿ ತೀವ್ರ ಕುಸಿತ ಕಂಡಿದೆ,'' ಎಂದು ತೋರಿಸಿದೆ.
ಕೆಲವು ರಾಜ್ಯಗಳಲ್ಲಿ ಲಸಿಕೆಯ ಕೊರತೆ ಕಂಡು ಬಂದಿದೆ. ಈ ಕಾರಣದಿಂದಾಗಿ ಹಲವು ಲಸಿಕೆ ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ತಾನ, ಪಂಜಾಬ್, ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಸಿಕೆ ಕೊರತೆ ಉಂಟಾಗಿದೆ. ರಾಜಸ್ತಾನದಲ್ಲಿ ಎರಡು ದಿನಗಳ ಕಾಲ ಕೊರೊನಾ ಲಸಿಕೆ ಕೇಂದ್ರವನ್ನು ಮುಚ್ಚಲಾಗುತ್ತದೆ ಎಂದು ಅಲ್ಲಿನ ಸರ್ಕಾರ ಘೋಷಣೆ ಮಾಡಿದೆ.
ಜೂನ್ 21 ರ ಬಳಿಕ ಏಳು ದಿನಗಳ ಕಾಲ 65 ಸಾವಿರ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿತ್ತು. ಈ ಮೂಲಕ ಲಸಿಕೆ ನೀಡಿಕೆ ಪ್ರಮಾಣ ಎಷ್ಟು ಪ್ರಮಾಣದಲ್ಲಿ ಇಳಿಕೆ ಕಂಡಿದೆ ಎಂಬುದನ್ನು ನಾವು ಅಂದಾಜು ಮಾಡಬಹುದಾಗಿದೆ.
ಆದರೆ ಈಗ 40 ಸಾವಿರ ಲಸಿಕೆ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುತ್ತಿದೆ. ಆದರೆ ಈ ನಡುವೆ ಕೇಂದ್ರ ಸರ್ಕಾರವು ರಾಜ್ಯದ ಬಳಿ ಇನ್ನೂ 1.67 ಕೋಟಿ ಲಸಿಕೆ ಇದೆ. ಇನ್ನೂ 2 ಕೋಟಿ ಲಸಿಕೆಯನ್ನು ನೀಡಲಾಗುವುದು ಎಂದು ಹೇಳಿಕೊಂಡಿದೆ.
ಈ ಹಿನ್ನೆಲೆ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕ ಗಾಂಧಿ, ''ಕೇಂದ್ರ ಸರ್ಕಾರದ ವ್ಯಾಕ್ಸಿನೇಷನ್ ನೀತಿಯು, ಒಂದು ದಿನದ ಅಭಿಯಾನವಾಗಿದೆ. ಕೋಟಿ ಪ್ರಚಾರ ಮಾಡಲಾಗುತ್ತದೆ. ಆದರೆ ಬಳಿಕ ಇರುಳು ಕತ್ತಲು ಆವರಿಸುತ್ತದೆ,'' ಎಂದು ಟೀಕಿಸಿದ್ದಾರೆ.
''ಪ್ರತಿಯೊಬ್ಬರಿಗೂ ಡಿಸೆಂಬರ್ ವೇಳೆಗೆ ಲಸಿಕೆ ಹಾಕಲು ಪ್ರತಿದಿನ 80-90 ಲಕ್ಷ ಲಸಿಕೆಗಳನ್ನು ನೀಡುವುದು ಅವಶ್ಯಕ. ಆದರೆ ಕಳೆದ 7 ದಿನಗಳಲ್ಲಿ ವ್ಯಾಕ್ಸಿನೇಷನ್ ದರವು ಶೇ. 32 ರಷ್ಟು ಕಡಿಮೆಯಾಗಿದೆ. ದೇಶಾದ್ಯಂತ 25 ಸಾವಿರ ಲಸಿಕೆ ಕೇಂದ್ರಗಳನ್ನು ಮುಚ್ಚಲಾಗಿದೆ. ರಾಜ್ಯಗಳಲ್ಲಿ ಲಸಿಕೆಗಳ ಕೊರತೆ ಇದೆ,'' ಎಂದು ಹೇಳಿದ್ದಾರೆ.