ಮುಂಬೈ: ಪೆಗಾಸಸ್ ಬೇಹುಗಾರಿಕೆ ವಿಚಾರದಲ್ಲಿ ಕೇಂದ್ರವನ್ನು ಶಿವಸೇನೆ ಗುರಿಯಾಗಿಸಿಕೊಂಡಿದೆ. ಆಯ್ದ ಭಾರತೀಯರ ಮೇಲೆ ಪೆಗಾಸಸ್ ಸೈಬರ್ ದಾಳಿಯು ಕೇಂದ್ರ ಸರ್ಕಾರದ ಒಪ್ಪಿಗೆಯಿಲ್ಲದೆ ನಡೆಯಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದೆ. "ದೇಶದಲ್ಲಿ ತುರ್ತು ಪರಿಸ್ಥಿತಿಗಿಂತ ಪೆಗಾಸಸ್ ದಾಳಿ ಹೆಚ್ಚು ಅಪಾಯಕಾರಿ," ಎಂದು ಶಿವಸೇನೆ ಸಂಪಾದಕೀಯ ಸಾಮ್ನಾದಲ್ಲಿ ಪ್ರಕಟಿಸಲಾಗಿದೆ. "ಪೆಗಾಸಸ್‌ನ ನಿಜವಾದ ಪಿತಾಮಹರು ನಮ್ಮ ಭಾರತ ದೇಶದಲ್ಲಿದ್ದಾರೆ, ಅವರನ್ನು ಹುಡುಕಬೇಕು," ಎಂದು ಶಿವಸೇನೆ ಹೇಳಿದೆ.
''ಪೆಗಾಸಸ್ ಆಯ್ದ ಭಾರತೀಯರ ಮೇಲೆ ಸೈಬರ್ ದಾಳಿಯು ಕೇಂದ್ರ ಸರ್ಕಾರದ ಒಪ್ಪಿಗೆಯಿಲ್ಲದೆ ನಡೆಯಲು ಸಾಧ್ಯವಿಲ್ಲ. ಪೆಗಾಸಸ್ ಬೇಹುಗಾರಿಕೆ ವಿಷಯದ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ?,'' ಎಂದು ಕೇಂದ್ರ ಸರ್ಕಾರವ್ನನು ಪ್ರಶ್ನಿಸಿರುವ ಶಿವಸೇನೆ, ''ಮೊದಲನೆಯದಾಗಿ, ಈ ಪೆಗಾಗಸ್ ಬೇಹುಗಾರಿಕೆ ಹಗರಣದ ವಿಷಯವನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಮಾಡಬೇಕು. ಇಲ್ಲದಿದ್ದರೆ, ಸುಪ್ರೀಂ ಕೋರ್ಟ್ ಸುಯೊ ಮೋಟೋ ಕಾಗ್ನಿಜೆನ್ಸ್ ತೆಗೆದುಕೊಂಡು ಪೆಗಾಸಸ್ ಬಗ್ಗೆ ತನಿಖೆಗಾಗಿ ಸ್ವತಂತ್ರ ಸಮಿತಿಯನ್ನು ನೇಮಿಸಬೇಕು. ರಾಷ್ಟ್ರೀಯ ಹಿತಾಸಕ್ತಿ ಈ ವಿಚಾರದಲ್ಲಿ ಅಡಗಿದೆ,'' ಎಂದು ಶಿವಸೇನೆ ತನ್ನ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಪ್ರಕಟ ಮಾಡಿದೆ.
ಮಂಗಳವಾರ, ಲೋಕಸಭೆಯ ಶಿವಸೇನೆಯ ಮುಖಂಡ ವಿನಾಯಕ್ ರಾವತ್ ನೇತೃತ್ವದ ಶಿವಸೇನೆ ಸಂಸದರ ನಿಯೋಗವು ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾಗಿ ಪೆಗಾಸಸ್ ಬೇಹುಗಾರಿಕೆಯ ಬಗ್ಗೆ ತನಿಖೆಗೆ ಜೆಪಿಸಿ ರಚಿಸಲು ಹಾಗೂ ಪೆಗಾಸಸ್ ಬೇಹುಗಾರಿಕೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. "ವರದಿಯ ಪ್ರಕಾರ, ವಿರೋಧ ಪಕ್ಷದ ನಾಯಕರು, ಮಂತ್ರಿಗಳು, ಪತ್ರಕರ್ತರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಇತರರು ಸೇರಿದಂತೆ ಕನಿಷ್ಠ 40 ಜನರ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ," ಎಂದು ಶಿವಸೇನಾ ನಾಯಕರು ಸ್ಪೀಕರ್‌ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತುರ್ತು ಪರಿಸ್ಥಿತಿಗಿಂತ ಅಧಿಕ ಅಪಾಯಕಾರಿ
"ತುರ್ತು ಪರಿಸ್ಥಿತಿ ಹೇರಿದ್ದ ದಿನದಂದು ಪ್ರತಿವರ್ಷ ಬೆರಳೆಣಿಕೆಯಷ್ಟು ಜನರು ಕಪ್ಪು ದಿನವನ್ನು ಆಚರಿಸುತ್ತಾರೆ. ಪೆಗಾಸಸ್ ದಾಳಿ ತುರ್ತು ಪರಿಸ್ಥಿತಿಗಿಂತ ಹೆಚ್ಚು ಅಪಾಯಕಾರಿ. ಪೆಗಾಸಸ್‌ನ ನಿಜವಾದ ಪಿತಾಮಹರು ನಮ್ಮ ದೇಶದಲ್ಲಿದ್ದಾರೆ ಮತ್ತು ಅವರನ್ನು ಹುಡುಕಬೇಕು," ಎಂದು ಶಿವಸೇನೆ ಒತ್ತಾಯಿಸಿದೆ.
ಇನ್ನು "ಈ ಪೆಗಾಸಸ್ ಬೇಹುಗಾರಿಕೆಯು ಗೌಪ್ಯತೆ ಹಕ್ಕಿನ ಮೇಲಿನ ನೇರ ದಾಳಿ," ಎಂದು ಹೇಳಿದ ಶಿವಸೇನೆ, "ಕೇಂದ್ರ ಗೃಹ ಸಚಿವ ಅಮಿತ್ ಶಾ ಇದು ದೇಶ ಮತ್ತು ಪ್ರಜಾಪ್ರಭುತ್ವವನ್ನು ಕೆಣಕುವ ಅಂತರರಾಷ್ಟ್ರೀಯ ಪಿತೂರಿ ಎಂದು ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ. ಆದರೆ ದೇಶಕ್ಕೆ ನಿಜವಾಗಿ ಮಾನಹಾನಿ ಮಾಡುವವರು ಯಾರು ಎಂದು ಗೃಹ ಸಚಿವರು ಹೇಳಬಹುದೇ? ಸರ್ಕಾರ, ಪ್ರಜಾಪ್ರಭುತ್ವ ಮತ್ತು ದೇಶ ನಿಮ್ಮದಾಗಿದೆ. ಹಾಗಾದರೆ, ಇದೆಲ್ಲವನ್ನೂ ಮಾಡುವ ಧೈರ್ಯ ಯಾರಿಗೆ ಇದೆ?," ಎಂದು ಪ್ರಶ್ನಿಸಿದೆ.
"ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬೇಹುಗಾರಿಕೆ ನಡೆಸಿದ ನಿದರ್ಶನಗಳು ವರದಿಯಾದಾಗ, ಬಿಜೆಪಿ ಪ್ರಧಾನಿ ಮತ್ತು ಗೃಹ ಸಚಿವರನ್ನು ರಾಜೀನಾಮೆ ನೀಡುವಂತೆ ಒತ್ತಾಯಿಸಿತ್ತು. ಈಗ, ಅದು ಅಧಿಕಾರದಲ್ಲಿದೆ. ಆದರೆ ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ಸಿದ್ಧವಾಗಿಲ್ಲ," ಎಂದು ಶಿವಸೇನೆ ಹೇಳಿದೆ.
ಇಂತಹ ಘಟನೆ ಇತಿಹಾಸದಲ್ಲೇ ಮೊದಲು
"ನ್ಯಾಯಾಂಗ, ಸಂಸತ್ತು, ಕಾರ್ಯನಿರ್ವಾಹಕ ಮತ್ತು ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕು ಸ್ತಂಭಗಳನ್ನು ಈಗ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಈಗ, ರಾಜಕೀಯ ವಿರೋಧಿಗಳ ಮೇಲೆ ಕಣ್ಣಿಡಲು ಭಾರತದಲ್ಲಿ ಪೆಗಾಸಸ್ ಸೇವೆಗಳನ್ನು ಯಾರು ಖರೀದಿಸಿದರು ಎಂಬುದು ಪ್ರಶ್ನೆ. ಇದು ನಮ್ಮ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಭವಿಸಿದೆ," ಎಂದು ಶಿವಸೇನೆ ಸಂಪಾದಕೀಯದಲ್ಲಿ ತಿಳಿಸಿದೆ.
"ಯುಎಸ್ ಅಧ್ಯಕ್ಷ ನಿಕ್ಸನ್ ಅಧಿಕಾರಾವಧಿಯಲ್ಲಿ, ವಾಟರ್ ಗೇಟ್ ಹಗರಣ ನಡೆಯಿತು. ಅಧ್ಯಕ್ಷರು ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಯಿತು. ಅದೇ ರೀತಿ, ಆಗಿನ ಚಂದ್ರಶೇಖರ್ ಸರ್ಕಾರವು ಇಬ್ಬರು ಪೊಲೀಸರನ್ನು ತನ್ನ ಮನೆಯ ಹೊರಗೆ ಬೀಡುಬಿಟ್ಟಿದ್ದಾರೆ ಎಂದು ರಾಜೀವ್ ಗಾಂಧಿ ಆರೋಪಿಸಿದ್ದರು. ಕಾಂಗ್ರೆಸ್ ತನ್ನ ಪತನಕ್ಕೆ ಕಾರಣವಾದ ಸರ್ಕಾರಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡಿತು. ಈ ಎಲ್ಲಕ್ಕಿಂತ ಪೆಗಾಸಸ್ ದಾಳಿ ಹೆಚ್ಚು ಅಪಾಯಕಾರಿ. ಏಕೆಂದರೆ ಆ ಅವಧಿಯಲ್ಲಿ ತಂತ್ರಜ್ಞಾನವನ್ನು ಹೆಚ್ಚು ಅಭಿವೃದ್ಧಿಪಡಿಸಿರಲಿಲ್ಲ," ಎಂದು ಶಿವಸೇನೆ ಅಭಿಪ್ರಾಯಿಸಿದೆ.
ಪೆಗಾಸಸ್ ವೈಯಕ್ತಿಕ ಸ್ವಾತಂತ್ರ್ಯ ಮೇಲಿನ ಆಕ್ರಮಣ
ಇನ್ನು ಈ ಪೆಗಾಸಸ್ ಪ್ರಕರಣವನ್ನು "ವೈಯಕ್ತಿಕ ಸ್ವಾತಂತ್ರ್ಯ" ದ ಆಕ್ರಮಣ ಎಂದು ಶಿವಸೇನೆ ಹೇಳಿದೆ. "ನಾವು ಇಸ್ರೇಲ್ ಅನ್ನು ಸ್ನೇಹಪರ ದೇಶವೆಂದು ಪರಿಗಣಿಸಿದ್ದೇವೆ. "ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಈ ಸ್ನೇಹವನ್ನು ಇನ್ನಷ್ಟು ಬಲಪಡಿಸಲಾಗಿದೆ. ಇಸ್ರೇಲ್‌ನಿಂದ ಬಂದ ಪೆಗಾಸಸ್ ಸ್ಪೈವೇರ್ ಕನಿಷ್ಠ 1500 ಭಾರತೀಯರ ಮೇಲೆ ಕಣ್ಣಿಟ್ಟಿದೆ. ರಾಹುಲ್ ಗಾಂಧಿಯಿಂದ ಹಿಡಿದು ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು, ಪತ್ರಕರ್ತರು, ಎಲ್ಲರ ಫೋನ್ ಟ್ಯಾಪ್ ಮಾಡಲಾಗಿದೆ. ಇದು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣ. ಇದು ಬೇಹುಗಾರಿಕೆ ಮಾಡುವ ನೇರ ಪ್ರಕರಣ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮೇಲಿನ ದಾಳಿ ಇದಾಗಿದೆ," ಎಂದಿದೆ.
ನಂಬಿಕೆಯನ್ನು ಕಳೆದುಕೊಂಡ ಕೇಂದ್ರ
ಭಾರತದ ಮಹಾನ್ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಾಳುಮಾಡುತ್ತಿದೆ. ಪೆಗಾಸಸ್ ಸೋರಿಕೆ ಭಾರತದ ಜನರ ನಂಬಿಕೆ ಮತ್ತು ಗೌಪ್ಯತೆಗೆ ಭಾರಿ ಉಲ್ಲಂಘನೆಯಾಗಿದೆ ಎಂದು ಮಹಾರಾಷ್ಟ್ರದ ಮಾಹಿತಿ ಮತ್ತು ತಂತ್ರಜ್ಞಾನ ಮತ್ತು ಗೃಹ ರಾಜ್ಯ ಸಚಿವ ಸತೇಜ್ ಪಾಟೀಲ್ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. ತಂತ್ರಜ್ಞಾನ ವೇದಿಕೆಗಳನ್ನು ಹೊಣೆಯಾಗಿಸುವ ಬದಲು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವಂತಹ ಬಲವಾದ ಐಟಿ ಕಾರ್ಯವಿಧಾನವನ್ನು ಪಾಟೀಲ್ ಒತ್ತಾಯಿಸಿದ್ದಾರೆ. ಹಾಗೆಯೇ ಈ ಪ್ರಕರಣದ ಮೂಲಕ ಕೇಂದ್ರ ಸರ್ಕಾರವನ್ನು ನಂಬಿಕೆಯನ್ನು ಕಳೆದುಕೊಂಡಿದೆ ಎಂದಿದ್ದಾರೆ.