ಡ್ರಾಸ್: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭಾನುವಾರ ಗಡಿ ಪಟ್ಟಣವಾದ ಡ್ರಾಸ್ ಗೆ ಭೇಟಿ ನೀಡಿ, ಕೇಂದ್ರಾಡಳಿತ ಪ್ರದೇಶ ಲಡಾಖ್ ನ ಗಡಿನಿಯಂತ್ರಣಾ ರೇಖೆಯಲ್ಲಿ ಭದ್ರತಾ ಪರಿಸ್ಥಿತಿ ಮತ್ತು ಕಾರ್ಯಾಚರಣೆ ಸನ್ನದ್ಧತೆಯನ್ನು ಪರಿಶೀಲಿಸಿದರು.
ಗಡಿ ನಿಯಂತ್ರಣಾ ರೇಖೆಯಲ್ಲಿ ನಿಯೋಜಿಸಲಾಗಿರುವ ಭದ್ರತಾ ಪಡೆಗಳ ಸ್ಥೈರ್ಯವನ್ನು ಶ್ಲಾಘಿಸಿದ ರಾವತ್ ಎಂತಹುದೇ ಸಂದರ್ಭ ದಲ್ಲಿ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವಂತೆ ಕರೆ ನೀಡಿದರು. ಈ ಮಧ್ಯೆ, ಕಾರ್ಗಿಲ್ ವಿಜಯ್ ದಿವಸ್ ವರ್ಷಾಚರಣೆ ಅಂಗವಾಗಿ ಡ್ರಾಸ್ ನಲ್ಲಿ ಸೇನೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಳೆ 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಮಡಿದ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.ವಿಜಯ್ ದಿವಸ್ ಸಂದರ್ಭದಲ್ಲಿ ಕಾರ್ಗಿಲ್ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಭಾನುವಾರ ಕರೆ ನೀಡಿದ್ದಾರೆ.
ಜುಲೈ 26,1999 ರಂದು ಭಾರತೀಯ ಸೇನೆ, ಪಾಕಿಸ್ತಾನವನ್ನು ಸೋಲಿಸಿದ ಹಿನ್ನೆಲೆಯಲ್ಲಿ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ್ ಆಗಿ ಆಚರಿಸಲಾಗುತ್ತದೆ.