ಕಾಸರಗೋಡು: ಚಿನ್ನಕಳ್ಳಸಾಗಾಟ, ಮಹಿಳಾ ದೌರ್ಜನ್ಯ, ಮಾದಕವಸ್ತು ಮಾರಾಟ ಹಾಗೂ ಗೂಂಡಾ ತಂಡಗಳ ಪೋಷಣೆ ಸಿಪಿಎಂನ ಆಧಾರಸ್ತಂಭಗಳಾಗಿ ಬದಲಾಗಿದೆ ಎಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ಅವರು ಅರಣ್ಯ ಲೂಟಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಚಿನ್ನಕಳ್ಳಸಾಗಾಟಗಾರರನ್ನು ಪೋಷಿಸುವ ಸರ್ಕಾರ ಹಾಗೂ ಸಿಪಿಎಂ ತನ್ನ ಧೋರಣೆ ಕೈಬಿಡಬೇಕು, ಮಹಿಳಾ ದೌರ್ಜನ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ನಗರಸಭಾ ಸಮಿತಿ ವತಿಯಿಂದ ಹೊಸ ಬಸ್ ನಿಲ್ದಾಣ ವಠಾರದಿಂದ ಆರಂಭಗೊಂಡ ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಅರಣ್ಯ ಲೂಟಿ ಮೂಲಕ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ. ಚಿನ್ನಕಳ್ಳಸಾಗಾಟಗಾರರಿಗೆ ಸರ್ಕಾರ ಸಂಪೂರ್ಣ ರಕ್ಷಣೆ ನೀಡುತ್ತಿರುವುದರಿಂದ ವ್ಯಾಪಕವಾಗಿ ಚಿನ್ನಕಳ್ಳಸಾಗಾಟ ನಡೆದುಬರುತ್ತಿದೆ. ಇನ್ನೊಂದೆಡೆ ಕೇರಳದಲ್ಲಿ ವರದಕ್ಷಿಣೆ ಕಿರುಕುಳದಿಂದ ಮಹಿಳೆಯರ ಆತ್ಮಹತ್ಯೆ ಹೆಚ್ಚಾಗತೊಡಗಿದೆ. ಪಿಣರಾಯಿ ವಿಜಯನ್ ಆಡಳಿತದಲ್ಲಿ ಮಹಿಳಾ ಆಯೋಗದ ಮೇಲೆ ಮಹಿಳೆಯರಿಗಿದ್ದ ಭರವಸೆ ಸಂಪೂರ್ಣ ನಾಶಗೊಂಡಿರುವುದಾಗಿ ತಿಳಿಸಿದರು. ಬಿಜೆಪಿ ರಾಜ್ಯ ಸಮಿತಿ ತೀರ್ಮಾನದನ್ವಯ ಜಿಲ್ಲೆಯ 200ಕೇಂದ್ರಗಳಲ್ಲಿ ಪಾದಯಾತ್ರೆ ನಡೆಯಿತು.