ಕಾಸರಗೋಡು: ಕೇರಳದಲ್ಲಿ ಎಂದಿನಂತೆ ಜಾರಿಯಲ್ಲಿರುವ ವಾರಾಂತ್ಯ ಕೋವಿಡ್ ನಿಯಂತ್ರಣದಲ್ಲಿ ಜುಲೈ 18ರಿಂದ ಮೂರು ದಿವಸಗಳ ಕಾಲ ವಿನಾಯಿತಿ ಪ್ರಕಟಿಸುತ್ತಿದ್ದಂತೆ ಪೇಟೆಗಳಲ್ಲಿ ಜನದಟ್ಟಣೆ ಹೆಚ್ಚಲು ಕಾರಣವಾಗಿದೆ. ಕಾಸರಗೋಡು ನಗರದೆಲ್ಲೆಡೆ ಟ್ರಾಫಿಕ್ ಜಾಮ್ ತಲೆದೋರಲಾರಂಭಿಸಿದೆ. ಬಕ್ರಿದ್ ಹಬ್ಬಕ್ಕೆ ಮೂರು ದಿವಸ ಬಾಕಿ ಉಳಿದಿರುವಂತೆ ಜನತೆ ಬಟ್ಟೆ, ಚಪ್ಪಲಿ ಸೇರಿದಂತೆ ನಾನಾ ಸಾಮಗ್ರಿ ಖರೀದಿಗೆ ಮುಗಿ ಬೀಳಲಾರಂಭಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳದ ಭೀತಿಯೂ ತಲೆದೋರಿದೆ.
ಸರ್ಕಾರ ಮೂರು ದಿನಗಳ ಕೋವಿಡ್ ನಿಬಂಧನೆಯಲ್ಲಿ ವಿನಾಯಿತಿ ಪ್ರಕಟಿಸುತ್ತಿದ್ದಂತೆ ಜನತೆಯ ಓಡಾಟ ಹೆಚ್ಚಳಗೊಂಡಿದೆ. ಇನ್ನೊಂದೆಡೆ ಜನತೆ ಅನಗತ್ಯವಾಗಿ ಅಡ್ಡಾಡುತ್ತಿರುವ ಬಗ್ಗೆ ತಪಾಸಣೆ ಚುರುಕುಗೊಳಿಸಿದ್ದಾರೆ. ಲಾಕ್‍ಡೌನ್ ವಿನಾಯಿತಿ ಘೋಷಿಸಿರುವ ಸರ್ಕಾರ, ಈ ವಿನಾಯಿತಿ ದುರುಪಯೋಗವಾಗದಂತೆ ನೋಡಿಕೊಳ್ಳಲು ಪೊಲೀಸರು ತಯಾರಾಗಬೇಕು. ಯಾವುದೇ ಕಾರಣಕ್ಕೂ ಜನದಟ್ಟಣೆಗೆ ಅವಕಾಶಮಾಡಿಕೊಡಬಾರದು ಎಂದು ತಿಳಿಸಿದ್ದರೂ, ಜನದಟ್ಟಣೆ ನಿಯಂತ್ರಿಸುವಲ್ಲಿ ಪೊಲೀಸರೂ ವಿಫಲವಾಗುತ್ತಿದ್ದಾರೆ. ಕೇರಳದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದರೂ, ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಲಾಕ್‍ಡೌನ್ ವಿನಾಯಿತಿ ಕಲ್ಪಿಸಿರುವುದು ವ್ಯಾಪಕ ಟೀಕೆಗೂ ಕಾರಣವಾಗುತ್ತಿದೆ.
ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರದಂದು ಸಂಪೂರ್ಣ ಲಾಕ್‍ಡೌನ್ ಸೇರಿದಂತೆ ಕಟ್ಟುನಿಟ್ಟಿನ ನಿಯಂತ್ರಣದ ನಡುವೆಯೂ ಟಿ.ಪಿ.ಆರ್ ಕಡಿತಗೊಳಿಸಲು ಸಾಧ್ಯವಾಗದಿರುವುದು ಆತಂಕಕ್ಕೆ ಕಾರಣವಾಗಿದೆ.