ನವದೆಹಲಿ: 'ಮುಂದಿನ ಮೂರು ತಿಂಗಳು ಮಹತ್ವದ್ದಾಗಿರುವುದರಿಂದ ಮತ್ತು ಅನ್‌ಲಾಕ್‌ನಿಂದಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇರುವುದರಿಂದ ದೆಹಲಿ ಸರ್ಕಾರವು ಎಚ್ಚರಿಕೆಯಿಂದ ಇರಬೇಕು' ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ಸಲಹೆ ನೀಡಿದ್ದಾರೆ.
ಜುಲೈ 9ರಂದು ನಡೆದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಭೆಯಲ್ಲಿ ಮಾತನಾಡಿದ ಅವರು, 'ದೆಹಲಿಯು ದೇಶದ ರಾಜಧಾನಿಯಾಗಿರುವ ಕಾರಣ ಅಂತರರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧ ವಿಧಿಸುವ ಮುನ್ನ ಕೇಂದ್ರ ಸರ್ಕಾರದ ಸಲಹೆ ಪಡೆಯಬೇಕು' ಎಂದು ಸೂಚಿಸಿದ್ದಾರೆ.
ಜುಲೈ 20ರಂದು ಬಿಡುಗಡೆ ಮಾಡಿರುವ ಸಭೆಯ ಸಾರಾಂಶದಲ್ಲಿ 'ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆಯ ಪ್ರಮಾಣವು ಅತ್ಯಂತ ಕಡಿಮೆ ಇದೆ. ಆದರೆ, ಅನ್‌ಲೌಕ್ ಚಟುವಟಿಕೆಗಳು ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಹಾಗಾಗಿ, ಮುಂದಿನ ಮೂರು ತಿಂಗಳ ಕಾಲ ಮಹತ್ವದ್ದಾಗಿದ್ದು, ನಾವು ಜಾಗರೂಕರಾಗಿರುವುದು ಅವಶ್ಯಕ' ಎಂದು ಪೌಲ್ ಹೇಳಿದ್ದಾರೆ.
ಸಭೆಯಲ್ಲಿ ಹಾಜರಿದ್ದ ದೆಹಲಿಯ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್, 12 ರಾಜ್ಯಗಳಲ್ಲಿ ಕೊರೊನಾ ವೈರಸ್‌ನ ರೂಪಾಂತರ ಡೆಲ್ಟಾ ಪ್ಲಸ್ ಕುರಿತು ಮಾಹಿತಿ ನೀಡಿ, ಈಶಾನ್ಯ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯ ಹೆಚ್ಚಳವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಿಂದ ಬರುವವರಿಗೆ ಈ ಹಿಂದೆ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದನ್ನು ಉಲ್ಲೇಖಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು, ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿಯ ಬದಲು ಲಸಿಕೆ ಪ್ರಮಾಣಪತ್ರವನ್ನು ಮಾನದಂಡವಾಗಿಸಿಕೊಳ್ಳಬೇಕು. ಏಕೆಂದರೆ ಇದು ಲಸಿಕೆ ಹಾಕಿಸಿಕೊಳ್ಳುವ ಪ್ರಮಾಣವನ್ನು ಉತ್ತೇಜಿಸುತ್ತದೆ ಎಂದರು.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಡಾ. ಸಮ್ರಿಯಾನ್ ಪಾಂಡಾ ಅವರು, 'ಮೂರನೇ ಅಲೆಯು ಎರಡನೇ ಅಲೆಯಷ್ಟು ತೀವ್ರವಾಗಿರುವ ಸಾಧ್ಯತೆ ಇಲ್ಲ' ಎಂದು ಡಿಡಿಎಂಎಗೆ ತಿಳಿಸಿದರು.
ಕೋವಿಡ್ 2ನೇ ಅಲೆಯಲ್ಲಿ ದೆಹಲಿಯಲ್ಲಿ ಅಪಾರ ಪ್ರಮಾಣದ ಜನರು ಸಾವಿಗೀಡಾಗಿದ್ದರು. ಏಪ್ರಿಲ್ 20ರಂದು ಒಂದೇ ದಿನ ದೆಹಲಿಯಲ್ಲಿ 28,395 ಕೋವಿಡ್ ಪ್ರಕರಣಗಳು ವರದಿಯಾಗಿದ್ದರು. ಮೇ 3ರಂದು ಅತಿ ಹೆಚ್ಚು ಪ್ರಮಾಣದಲ್ಲಿ ಅಂದರೆ 448 ಮಂದಿ ಸಾವಿಗೀಡಾಗಿದ್ದರು.